ಭಾವ ತುಂಬಿದ ಜೀವ ಇದು…

ಆಸೆಯ ಬದುಕು

ನಂದನವನದಲಿ
ಅರಳಿರುವ ಸುಮದೊಡನೆ
ಮನಬಿಚ್ಚಿ ನೂರಾಸೆ ಹೇಳುವಾಸೆ
ನಲ್ಮೆಯ ಆಲಿಂಗನ ನೀಡುವಾಸೆ

ಮುದುಡಿ ಹೋಗಿ ಮಲಗಿದ್ದ ಆ ನೂರು
ಕನಸುಗಳ ನೀರೆರೆದುಜೀವಸೆಲೆ ನೀಡುವಾಸೆ|
ಮೌನದಲಿ ಮಾತಾಗಿ ಮಂಕಾದ ಗೆಳತಿಗೆ
ಬದುಕಲ್ಲಿ ಗೆಲುವನ್ನು ಚಿಮ್ಮಿಸುವಾಸೆ|೧|

ನಂದನವನದಲಿ…

ಸ್ವಪ್ನ ಸೌಧದಾ ನೆರಳಿನಲಿ ಗೆಳತಿಗೊಂದು
ನನಸಿನ ಗೋಪುರವನ್ನು ಕಟ್ಟುವಾಸೆ|
ಭರವಸೆಯ ತಳಹದಿಗೆ ಉಸಿರಾಗಿ ನಿಂತಿರುವ
ಸಂಗಾತಿಯ ಉಸಿರಿಗೆ ದನಿಯಾಗುವಾಸೆ|೨|

ನಂದನವನದಲಿ…

ಜೀವನ

ಬದುಕು ಪಲ್ಲವಿ ಇಲ್ಲದ ಹಾಡು
ಬದುಕು ಬವಣೆಗಳ ಗೂಡು
ಕನಸ ರಂಗೋಲಿ ಬಿಡಿಸಿ ನೋಡು
ಬೆಳಗುವುದು ನಿನ್ನ ಮನದ ಬೀಡು

– ವಿವೇಕ್ ನಂಬಿಯಾರ್

ಪರಂಪರೆ

ನಾನು ಬರಿಯ ಗೋಡೆ ಅಲ್ಲ

ಚಿತ್ತಾರ ಬಿಡಿಸಿಹರು ಎಲ್ಲಾ ನನ್ನಲಿ

ಹಲವು ಬಣ್ಣಗಳ ಗೂಢಾರ್ಥದಿ

ಸೂಚಿಸುವ ಕ್ಲಿಷ್ಟತೆಯ ಸಂದೇಶವ

ಹಚ್ಚಿಹರು ಬಣ್ಣಗಳ ಮಿಶ್ರಣದಿ

*****

ಒಬ್ಬರಿಗೆ ಗೋಡೆಯಲ್ಲಿ ಒಂದಿಷ್ಟ

ಮತ್ತೊಬ್ಬರಿಗೆ ಇನ್ನೊಂದು

ಇಷ್ಟವಾದಲೆಲ್ಲಾ ಹಚ್ಚುತ್ತಲೇ ಬಣ್ಣವ

ತಮಗಿಷ್ಟವಾದುದನ್ನು ಕಳೆಯುತಿಹರು

ತಮಗರಿವಿಲ್ಲದಂತೆ ಮರೆಯುತಿಹರು

*****

ಏನು ಮಾಡಿದರೂ ಸಂತೋಷವೇ

ಆದರೆ ವಿರೂಪಗೊಂಡರೆ ದುಃಖವಲ್ಲವೇ

ಅದಕ್ಕೆ ಗೋಡೆಗೆ ಈ ನೋವು ಈ ತರ

ತನ್ನನ್ನು ಕನಸ ಚಿತ್ತಾರಕೆ ಬಳಸದೆ

ವಿಕೃತಿಗೇಕೆ ಬಳಸುತ್ತಿದಾರೆಂದು

*****

ಹಲವು ಶತಮಾನಗಳಿಂದ ನಿಂತಿಹೆನು

ನನ್ನೆದೆಗೆ ಹಚ್ಚಿರಿ ಬಣ್ಣ ಎಂದು

ಅದರರ್ಥವ ಅರಿಯದ ಮೂಢಜನ

ವಿಕೃತ ಚಿತ್ತಾರದಿ ಕಳೆಗೆಡಿಸುತಿಹರು

ಐತಿಹಾಸಿಕ ಪರಂಪರೆ ಅಳಿಸುತಿಹರು

ಪರದೆ

ಏನೆಂದು ಹೆಸರಿಡಲಿ ಈ ಬಾಂಧವ್ಯಕೆ

ಪ್ರೀತಿ ಎನ್ನಲೇ ಸ್ನೇಹ ಎನ್ನಲೇ

ಎರಡೂ ಅಲ್ಲದ ಮೇಲೆ ಹೇಗಾಯ್ತು ಬಾಂಧವ್ಯ

ಹೊತ್ತು ಕಳೆಯುವ ಮೊದಲು ಉತ್ತರಿಸಬೇಕೇ

ಗೊತ್ತಿದ್ದರೂ ಗೊತ್ತಿಲ್ಲದಂತೆ ಉದ್ಧರಿಸಬೇಕೇ

ಸ್ನೇಹದ ಪರದೆಯ ಹಿಂದೆ ಅಡಗಿತ್ತು ಪ್ರೀತಿ

ಒಲವೆಂಬ ಮಿತಿಯ ದಾಟದಾಯಿತು ಸ್ನೇಹ

ಇಷ್ಟ ಕಷ್ಟ ಗಳ ಮಧ್ಯೆ ಮುರುಟಿತು ಒಲವು

ಯಾತನೆಯ ಮುಂದೆ ಮುಗುಳ್ನಕ್ಕಿತು ಸ್ನೇಹ

ಆ ನಗೆಯಲಿ ಲೀನವಾಯಿತು ಪ್ರೀತಿ

ಒಡಲಾಳದಿ ಪ್ರೀತಿ ಟಿಸಿಲೊಡೆದರೂ

ಹೃದಯದಲಿ ಸ್ನೇಹ ಉಕ್ಕಿ ಪಸರಿಸಿದರೂ

ನಗುವಲಿ ಒಲವ ಧಾರೆ ಬೆರೆತಿದ್ದರೂ

ಕರೆವಾಗಲೆಲ್ಲಾ ಜನಿಸುತ್ತಿದ್ದಳು ಆಕೆ

ಪ್ರೀತಿ-ಸ್ನೇಹ-ಒಲವೋ ಗೊತ್ತಿಲ್ಲದಂತೆ

ಸೂರ್ಯ ರಶ್ಮಿ

ಮುಂಜಾವಿನಲಿ ಭುವಿ ಆಕಳಿಸುತ್ತಿದ್ದಂತೆ

ಮಂಜಿನ ಬಿಂದುಗಳೆಲ್ಲಾ ಜಾರಿ ಹೋದಂತೆ

ಕನಸೆಂಬ ಪಠ್ಯ ಪುಸ್ತಕ ಮುಚ್ಚಿಕೊಂಡಿರಲು

ಸ್ತುತಿಯೊಂದಿಗೆ ದೃಷ್ಟಿ ತೆರೆದುಕೊಳ್ಳುವ ಮೊದಲು

ಭೂಮಿಯನ್ನು ಚುಂಬಿಸಿತ್ತು ಸೂರ್ಯರಶ್ಮಿ

ಹಿತವಾದ ಕಿರಣದಿಂದ ತಣಿದಿರಲು ಈ ಸೃಷ್ಟಿ

ಎತ್ತ ನೋಡಿದರತ್ತ ಹಬ್ಬಿಹುದು ವರ್ಣ ವೃಷ್ಟಿ

ಸುವರ್ಣ ಮಂಜ ಹನಿ ಕರಗಿದಂತೆಲ್ಲಾ

ಹೊಂಬಣ್ಣದ ವ್ಯಾಪ್ತಿ ಹರಡಿದಂತೆಲ್ಲಾ

ಭೂಮಿಯನ್ನು ಚುಂಬಿಸಿತ್ತು ಸೂರ್ಯ ರಶ್ಮಿ

ಕಾನನದ ಅಂಧಕಾರ ಮರೆಯಾಗುತ್ತಿರಲು

ಮನದಲ್ಲಿ ಮೌಢ್ಯ ಕೊನೆಯಾಗುತ್ತಿರಲು

ರಾತ್ರಿ ಕಳೆದು ಬೆಳಗು ಮೂಡಿದಾಗ

ಮುಂಜಾವಿಗೆ ಚಂದ್ರ ಕಳೆದುಹೋದಾಗ

ಭೂಮಿಯನ್ನು ಚುಂಬಿಸಿತ್ತು ಸೂರ್ಯ ರಶ್ಮಿ

ಸಮಾಪ್ತಿ

ಕನಸು ಕಾಣುತ್ತಿದ್ದ ಕಂಗಳು ಬಾಡಿಹೋಗಿವೆ

ಹೊಳೆಯುತ್ತಿದ್ದ ಮೊಗವು ಮಂಕಾಗಿದೆ

ನಿರೀಕ್ಷಿತ ಅನಿರೀಕ್ಷಿತತೆಯ ಮಧ್ಯೆ

ರೋಧಿಸುತ್ತಿದೆ ಆ ಮನಸ್ಸು ಪ್ರತಿ ಸಂಧ್ಯೆ

ಅತ್ತ ಶ್ಯಾಮನ ಬರುವಿಕೆಗಾಗಿ ಕಾದು

ಇತ್ತ ಮೂರು ಗಂಟಿಗೆ ತಲೆಯೊಡ್ಡಿ

ಮತ್ತೆ ಶ್ಯಾಮನ ನೆನಪು ಮರುಕಳಿಸದಂತೆ

ತಾಳಿಯ ಗಂಟು ಗಟ್ಟಿಯಾಗಿರಿಸಿದಳು

ತನ್ನೆದೆಯ ಸೆರೆಮನೆಯಲ್ಲಿ ಬಚ್ಚಿಟ್ಟು ಮಾತು

ಬಿಚ್ಚಿಡಲಾಗದೆ ತಳಮಳಿಸಿ ಇತ್ತು

ಮಾತು ಮೌನವಾಗುವ ಮೊದಲು

ಅಸ್ಪಷ್ಟವಾಗಿತ್ತು ಆ ಮಾತು ತೊದಲು

ಅಂತರಂಗದಿ ಮತ್ತೆ ತೆರೆ ಬೀಳುತ್ತಿರಲು

ಸೂತ್ರಧಾರಿ ಮತ್ತೆ ರಂಗಸ್ಥಳಕ್ಕೇರಲು

ಎಲ್ಲವೂ ಸಮಾಪ್ತಿಯಾದ ಘೋಷಣೆ

ಹಾಗೆಯೇ ಅದು ಯಾರಿಗೋ ಅರ್ಪಣೆ

                                        ವಿವೇಕ್ ನಂಬಿಯಾರ್

ದುಃಖ – ದುಮ್ಮಾನ

ಹಂಚಿಕೊಳ್ಳೆಂದು ಬಳಿಬಂದು

ಹರಿದು ಹಂಚಿ ಹೋದಳು

ತನ್ನೆದೆಗೆ ಒರಗಿ ಅಳು ಎಂದು

ನನ್ನೆದೆಗೆ ಇರಿದಳು…

ಉಮ್ಮಳಿಸುತ್ತಿದ್ದ ಅಳು ನನ್ನಲ್ಲಿ

ಭೋರ್ಗರೆಯುತ್ತಿದ್ದ ನಗು ಅವಳಲ್ಲಿ

ಹಣೆಬರಹದಲ್ಲಿ ರಾಡಿಯೆದ್ದಿತೋ..

ಬಹುಶಃ ರಾಡಿಯೆಬ್ಬಿಸಿದಳೋ ಏನೋ…

ಮೇಲ್ಪಂಕ್ತಿಯಲಿ ಭೋಗದ ನೆರಳು

ಆ ನೆರಳಲಿ ಬಡತನದ ಇರುಳು

ಭೋಗದೆದುರು ಬಡವನ ಮರೆತಿತ್ತು

ಸುಪ್ಪತ್ತಿಗೆಯ ಕಡಲು ಕೈಬೀಸಿ ಕರೆದಿತ್ತು

ಇನ್ನೂ ನನಗ್ಯಾಕೆ ಆ ಭೋಗದ ನೆವ

ಕಳೆದುಹೋದೆನೆಂಬ ಚಿಂತೆಯ ಭಾವ

ಇರಲು ಬದುಕೆಂಬ ನೊಗದ ಭಾರ

ಮರೆಯಬಹುದೇ ಇರುಳ ನೋವ…?

                                                              — ವಿವೇಕ್ ನಂಬಿಯಾರ್

ಗೆಳತಿ ಹೇಳಿದ ಕಥೆಯಲ್ಲಿ ಅವನೇ ಬಲಿಯಾದಾಗ…

ಮಂಗಳೂರು ವಿ ವಿ ಯಲ್ಲಿ ಸ್ನಾತ್ತಕೋತ್ತರ ಪದವಿ ಮುಗಿಯುತ್ತಿದ್ದಂತೆ ವಿಭಾ ಕಾಲೇಜೊಂದರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಳು. ಈ ಮಧ್ಯೆ ಮದುವೆಯಾಗುವಂತೆ ಪದೇ ಪದೇ ಪೀಡಿಸುತ್ತಿದ್ದ ಅವರದೇ ಜಾತಿಯವನಾದ ಸುಶೀಲ್ ಮತ್ತು ಆತನ ಚಿಕ್ಕಮ್ಮನ ಮಾತಿಗೆ ಜೋತುಬಿದ್ದು ಮನೆಯಲ್ಲೂ ಕೂಡಾ ತಿಳಿಸದೆ ರಿಜಿಸ್ಟರ್ ಮದುವೆ ಮಾಡಿಕೊಂಡಿದ್ದಳು. ರಿಜಿಸ್ಟ್ರಾರ್ ಆಫೀಸ್ ನಲ್ಲಿ ಸಹಿ ಹಾಕಿ ಸುಶೀಲ್ ಆಸ್ಟ್ರೇಲಿಯಾಕ್ಕೆ ತೆರಳಿದ್ದ. ಅವರ ಮಧ್ಯೆ  ಇ-ಮೇಲ್ ಮುಖಾಂತರ ಸಂಪರ್ಕ ನಡೆಯುತ್ತಿತ್ತು. ಹೀಗಿರಲು ಒಂದು ದಿನ ವಿಭಾಳಿಗೆ ಸುಶೀಲ್ ಹಲವಾರು ಹುಡುಗಿಯರ ಜೊತೆ ದೈಹಿಕ ಸಂಬಂಧ ಹೊಂದಿರುವುದನ್ನು ತಿಳಿದು ಜಗಳವಾಡಿದ್ದಳು. ಹೀಗೆ ಕಾಡಿಬೇಡಿ ಆಗಿದ್ದ ರಿಜಿಸ್ಟರ್ ಮದುವೆ ಕೊನೆಗೊಳಿಸಲು ನಿರ್ಧರಿಸಿದ್ದಳು. ಅಲ್ಲಿಯವರೆಗೂ ಅವಳು ತನ್ನ ಮನೆಯವರಿಗೆ ವಿಷಯ ತಿಳಿಸಿರಲಿಲ್ಲ.

ಹೀಗಿರಲು ಒಂದು ದಿನ ತನಗೆ ಫೇಸ್ ಬುಕ್ ನಲ್ಲಿ ಯಾವಾಗಲೂ ಸಂದೇಶ ಕಳುಹಿಸುತ್ತಿದ್ದ ವಿ.ವಿ ಯಲ್ಲಿ ಹಿರಿಯ ವಿಧ್ಯಾರ್ಥಿಯಾಗಿದ್ದ ವಿಹಾನ್ ಜೊತೆಗೆ ಸ್ವಲ್ಪ ಸಲುಗೆ ಬೆಳೆಸಿಕೊಂಡಿದ್ದಳು. ತನ್ನೆಲ್ಲಾ ಕಥೆಯನ್ನು ಆಕೆ ಅವನಿಗೆ ತಿಳಿಸಿದ್ದಳು. ಅವರ ನಡುವಿನ ಸಲುಗೆ ಸ್ವಲ್ಪ ಸ್ವಲ್ಪವಾಗಿ ಮುಂದುವರಿದು ಹೋಗಿತ್ತು. ಮದುವೆಯ ಬಗೆಗಿನ ಎಲ್ಲಾ ಮಾತುಕತೆ ನಡೆದಿತ್ತು. ಹೀಗಿರಲು ಒಂದು ದಿನ ಆಕೆಯ  ಮನೆಯವರಿಗೆ ಆಕೆಯ ಹಳೆಯ ಕಥೆ ತಿಳಿಯಿತು. ಅವಳ ಮಾವ ಈ ವಿಷಯ ತಿಳಿದದ್ದೇ ತಡ ಸಿಡಿಮಿಡಿಗೊಂಡಿದ್ದರು. ತಮ್ಮ ಬಳಿ ಯಾವುದೇ ವಿಷಯ ತಿಳಿಸದ ಕಾರಣ, ವಿಭಾ ಸುಶೀಲ್ ನನ್ನೇ ಮದುವೆಯಾಗಬೇಕು, ಇದೇ ಅವಳಿಗೆ ಶಿಕ್ಷೆ ಎಂಬಂತೆ ಮಾತನಾಡಿದರು. ಕೊನೆಗೆ ಮಾತುಕತೆ ನಡೆದು ಸುಶೀಲ್ ನ ಮನೆಯವರು ಮುರಿದುಹೋಗಿರುವ ರಿಜಿಸ್ಟರ್ಡ್ ಮದುವೆಯನ್ನು ಕೊನೆಗೊಳಿಸಿ ಬೇರೆಯಾಗಲು ನಿರ್ಧರಿಸಿ ದೈವೋರ್ಸ್ ಗೆ ಅರ್ಜಿ ಸಲ್ಲಿಸಿದರು.

ಈ ಮಧ್ಯೆ ತನ್ನ ಮನೆಯಲ್ಲೂ ಜಗಳವಾಡಿ ವಿಭಾಳನ್ನೇ ಮದುವೆಯಾಗುವುದಾಗಿ ಪಟ್ಟು ಹಿಡಿದು ಮನೆಯವರನ್ನು ಒಪ್ಪಿಸಿದ್ದ ವಿಹಾನ್ ಆಕೆಯ ಎಲ್ಲಾ ಸಮಸ್ಯೆಗಳು ಪರಿಹಾರವಾದುದಕ್ಕೆ ಸಂತಸಗೊಂಡಿದ್ದ. ಇದ್ದಕ್ಕಿದ್ದಂತೆ ಜಾತಿ ಒಂದಾದರೂ ಭಾಷೆ ಮತ್ತು ಪ್ರಾಂತ್ಯದ ವಿಷಯದಲ್ಲಿ ಆಕೆಯ ಮನೆಯವರು ಒಪ್ಪದಿದ್ದಾಗ , ತಾನು ಪ್ರೀತಿಸುತ್ತಿದ್ದ ಹುಡುಗನ ಪ್ರೀತಿಯನ್ನು ಒಂದೇ ಏಟಿಗೆ ಕೊನೆಗಾಣಿಸಲು ನಿರ್ಧರಿಸಿದಳು. “ವಿಹಾನ್ ಇದು ಬದುಕಿನ ಸತ್ಯ. ನಾವು ನಮ್ಮ ಸಂಬಂಧವನ್ನು ಇಲ್ಲಿಗೇ ಕೊನೆಗೊಳಿಸೋಣ” ಅಂತ ವಿಭಾ ಹೇಳಿದಾಗ ಅವನ ಹೃದಯದ ಪ್ರಾಣಪಕ್ಷಿ ಅರ್ಧ ಹಾರಿಹೋಗಿತ್ತು. ತನ್ನ ಬದುಕಿನ ನೊಗಕ್ಕೆ ಜೊತೆಗಾತಿ ಸಿಕ್ಕಳು ಎಂದು ಹರ್ಷದಿಂದಿದ್ದ ವಿಹಾನ್ ಅಕ್ಷರಶಃ ಜೀವಕಳೆಯಿಲ್ಲದ ವಸ್ತುವಾಗಿಬಿಟ್ಟಿದ್ದ. ಆತ್ಮಹತ್ಯೆಯ ಆಲೋಚನೆಯೂ ಅವನ ಬಳಿ ಸುಳಿದಿತ್ತು. ಏನೂ ತಿಳಿಯದೆ ಕಂಗಾಲಾಗಿ ವಿಭಾಳ ಬಳಿ ಪರಿಪರಿಯಾಗಿ ತನ್ನ ಪ್ರೀತಿಯನ್ನು ಕೊಲ್ಲದಂತೆ ವಿಹಾನ್ ನಿವೇದಿಸಿಕೊಂಡ. ಆದರೆ ತನ್ನ ಹಿಂದಿನ ವ್ಯಥೆಗೆ, ಕಣ್ಣೀರಿಗೆ ಹೆಗಲು ಕೊಟ್ಟಿದ್ದ ವಿಹಾನ್ ನ ಪಾಲಿಗೆ ಕತ್ತನ್ನೇ ಕಡಿದ ಕೊಡಲಿಯಾಗಿಬಿಟ್ಟಳು. ಅವಳ ಮಾತುಗಳಿಗೆ, ಭರವಸೆಗೆ ಗಟ್ಟಿ ಕಲ್ಲಿನಂತಾಗಿದ್ದ ವಿಹಾನ್ ನ ಕಣ್ಣಿನಿಂದ ಅಶ್ರುಧಾರೆ ಸುರಿದಿತ್ತು. ಅವಳ ಕಥೆಗೆ-ವ್ಯಥೆಗೆ-ಕಣ್ಣೀರಿಗೆ ಭುಜಕೊಟ್ಟು ತನ್ನ ಬದುಕಿಗೆ ಆಕೆಯನ್ನೇ ಜೊತೆಯಾಗಿಸಲು ನಿರ್ಧರಿಸಿದ ವಿಹಾನ್, ಆಕೆ ಹೇಳಿದ ಕಥೆ ಕೇಳುತ್ತಾ ಕೇಳುತ್ತಾ ಬಲಿಯಾಗಿಹೋಗಿದ್ದ.

ತಮ್ಮ ಮಕ್ಕಳಿಗೆ ವಿಭಾ ಮತ್ತು ವಿಹಾನ್ ಅಂತಲೇ ಹೆಸರಿಡಲು ಸೂಚಿಸಿದ್ದ ವಿಭಾಳ ಮಾತುಗಳನ್ನು ಅರಗಿಸಿಕೊಳ್ಳಲಾಗದೇ ಭ್ರಮೆಯೋ, ಕನಸೋ ಎಂದು ತಿಳಿಯದೆ “ತನ್ನ ಮದುವೆ ಗೊತ್ತಾಗಿದೆ” ಎಂದು ವಿಭಾಳ ಸಂದೇಶ ಬರುವ ಹೊತ್ತಿಗೆ ಕನಸುಗಳಿಂದ ಮರೆಯಾಗಿ ಹೋಗಿದ್ದ. ಬಲಿಪೀಠದ ಮೇಲೆ ಕತ್ತಲು ಆವರಿಸಿತ್ತು. ಸಾವಿನ ಹಕ್ಕಿ ತನ್ನ ಇರುವಿಕೆಯನ್ನು ಸೂಚಿಸುತ್ತಿತ್ತು.

ಸಾಮರಸ್ಯ

ಎಲ್ಲಿಹುದು ಸಮರಸ

ಎಲ್ಲಿಹುದು ಬಾಂಧವ್ಯ 

ಇಲ್ಲಿ ಎಲ್ಲವೂ ಇದೆ ನಮ್ಮೊಳಗೆ

ನಮ್ಮೊಳಗಿದ್ದೂ ಇಲ್ಲದಂತಿದೆ

 

ನಿಗ್ರಹಿಸಿದಷ್ಟೂ ಬೆಳೆಯುತ್ತಿದೆ ವೈಷಮ್ಯ

ಜಾತಿಗಳಾದಿಯಾಗಿ ಧರ್ಮ ಮತಗಳವತರೆಗೆ

ಮನುಜ ಮತವ ಅರಿಯದೆ

ಕುಲದ ಮೂಲದಲ್ಲಿ ಕ್ಷೋಭೆಯೆದ್ದಿದೆ

 

ನಿತ್ಯದ ಬದುಕ ಜಂಜಾಟದಲಿ

ಬದುಕ ರೂಪಿಸಲು ಹಲವರು

ಬದುಕ ಮುಗಿಸಲು ಕೆಲವರು

ಜಾಲ ಹೆಣೆದಿಹರು ಸುಪ್ತವಾಗಿ

 

ಕಷ್ಟಪಡುವುದು ರೀತಿಯೋ

ಇಷ್ಟಪಡುವುದು ಭೀತಿಯೋ

ಬದುಕುವುದು ರೀತಿಯೋ

ಸಾಯುವುದು ಭೀತಿಯೋ

 

ಇಲ್ಲಿ ಎಲ್ಲವೂ ಇದೆ

ಆದರೆ ಯಾವುದೂ ಇಲ್ಲ

ನಮ್ಮ ನಿಮ್ಮೊಳಗಿನ ಮಾತ್ಸರ್ಯದೊಳಗೆ

ಅಡಗಿ ಕುಳಿತಿವೆ ಬೆಚ್ಚಗೆ ಕ್ರೌರ್ಯದೊಂದಿಗೆ

 

ಎಲ್ಲೆಲ್ಲೋ ಏಕೆ ಹುಡುಕುವಿರಿ

ಶಾಂತಿ ಸಹನೆಯ ಪದವ

ನಿಮ್ಮ ಹೃದಯಾಂತರಾಳದಲಿ ಶೋಧಿಸಿ ಬನ್ನಿ

ಸಮರಸದ ದಿವ್ಯ ಮಂತ್ರವ

ಏಕೆ

ಬಣ್ಣ ಬಣ್ಣದ ಆಸೆ ತೋರಿಸಿ ಹಾರಿ ಹೋಗುವ

ಚಿತ್ತಾರದ ಪತಂಗದ ತೆರ ತನ್ಮಯದಿ

ಬದುಕಿನ ಸ್ವರ್ಣ ಪುಟದಿ ಬರೆದು ಅಳಿಸಿ ಹೋದ

ಓ ನನ್ನ ಅಕ್ಷರವೇ ನೀ ಯಾಕೆ ಹೀಗೆ…?

ಒಂದೊಮ್ಮೆ ಕಣ್ಣಲ್ಲಿ ಕಣ್ಣಾಗಿ ಮತ್ತೊಮ್ಮೆ ಕಸವಾಗಿ

ಸರಸ ವಿರಸದ ತುದಿಯಂಚಲಿ ನಿಂತು ನಗುವೆಯೇಕೆ…?

ವರ್ತಮಾನದಲ್ಲಿ ನಿಂತು ಭೂತಕ್ಕೆ ಭಯಪಡುತ್ತಾ

ಭವಿಷ್ಯದ ತೀರ್ಮಾನಕ್ಕೆ ಗೋರಿ ಕಟ್ಟುವೆಯೇಕೆ…?

ಕಾತರಿಸಿದ ಕ್ಷಣ ಬಯಸಿ ದೊರೆತ ಕ್ಷಣ ಅಲಕ್ಷಿಸಿ

ಬರಿಯ ನಾಯಕ ಪೂಜೆಗೆ ಕುಳಿತೆಯೇಕೆ…?

ನನ್ನವನಾಗಬಾರದಿತ್ತೇ ಎಂದು ಚಿಂತಿಸಿದ ಕ್ಷಣಕ್ಕಿಂತ

ಯಾಕಾಗಿ ಬಯಸಿದೆನೋ ಎನ್ನುವ ಅಲಕ್ಷ್ಯವೇಕೆ…?

ಮುಂದೊಂದು ದಿನ ನೀ ಮಾಡಿದ್ದು ಸರಿ ಎಂದೆನಿಸಿದರೆ

ಅವ ಮಾಡಿದ್ದು ತಪ್ಪೆನಿಸಿ ಸಂತಸದಿಂದಿರುವೆಯಾ…?

ನೀ ಮಾಡಿದ್ದು ತಪ್ಪೆಂದು ಅರಿವಾಗಿ ತಿರುಗಲು

ಅವ ಬೇರೆಲ್ಲೋ ಹೋಗಿದ್ದರೆ ನೀ ಅಳುವೆಯಾ…?

ಕಲೆತು ಬಿಡು ಎಂದು ಈಗ ಮರೆತುಬಿಡು ಅಂದರೆ

ಇವೆಲ್ಲದರ ಗೂಢಾರ್ಥಕ್ಕೆ ಕೊನೆಯೆಲ್ಲಿ ಹುಡುಕಲಿ…?

ಎಲ್ಲ ರೌದ್ರತೆಯ ಚೌಕಟ್ಟಿನೊಳಗೆ ಮತ್ತೆ ಬೇಕೆಂದಾಗ

ಮತ್ತೊಮ್ಮೆ ಹುಟ್ಟಿ ಬರಲು ಅವನಿಂದ ಸಾಧ್ಯವೇ…?

ಅವಳು

ಬದುಕು ಏನು ಎಂದು ತಿಳಿಯದ ವಯಸ್ಸಿಗೆ ಅವನು ಬದುಕಿನ ವಿವಿಧ ಹಂತಗಳನ್ನು ಜಾಲಾಡಲು ಹೊರಟಿದ್ದ. ಸಂಸಾರ ಮತ್ತು ವೃಧಾಪ್ಯ, ಈ ಎರಡನ್ನು ಬಿಟ್ಟರೆ ಎಲ್ಲ ವಿಚಾರಗಳ ಒಳಹೊಕ್ಕು ಬಂದಾಗಿತ್ತು. ಅದೂ ಪದವಿ ಪ್ರಥಮ ವರ್ಷದೊಳಗಿನ ಸಮಯದಲ್ಲಿ…

ಆ ನಡುವಿನ ಹಂತದಲ್ಲಿ ಪ್ರೀತಿ ಎಂಬ ಎರಡಕ್ಷರದ ಪರಿವೆಯೇ ಇರಲಿಲ್ಲ. ಆದರೂ ಎಷ್ಟೋ ಜನ ಅವನ ಬದುಕಿನಲ್ಲಿ ಬಂದು ಪ್ರೀತಿಯ ಆಸೆ ತೋರಿಸಿ ಕಣ್ಮರೆಯಾಗಿದ್ದರು. ಅವರಿಗೆಲ್ಲ ಬೇಕಿದ್ದುದು ಪ್ರೀತಿಯಲ್ಲ… ಬೇರೇನೋ… ಅದೇ ಸಂದರ್ಭದಲ್ಲಿ ಪದವಿ ವಿದ್ಯಾಭ್ಯಾಸದ ನಡುವೆ ಒಬ್ಬಳು ಹುಡುಗಿ ತುಂಬಾ ಆತ್ಮೀಯಳಾದಳು. ಮಂಗಳೂರು ವಿ.ವಿ. ಯ ಕ್ಯಾಂಪಸ್ ನಲ್ಲಿ ನಡೆದ ಕ್ಯಾಂಪ್ ನಲ್ಲಿ ಅವಳ ಪರಿಚಯವಾಯಿತು. ಆಕೆಯಿಂದ ನಿಜವಾದ ಪ್ರೀತಿಯ ಭಾವದ ಅರಿವಾಯಿತು. ಅವಳು ಕೇವಲ ಎರಡೇ ದಿನದಲ್ಲಿ ಆತ್ಮೀಯಳಾಗಿ ಹೋಗಿದ್ದಳು. ಸ್ನಾನ, ನಿದ್ದೆ ಬಿಟ್ಟರೆ ಮತ್ತೆಲ್ಲಾ ಚಟುವಟಿಕೆಗಳಲ್ಲಿ ಅವರು ಜೊತೆಯಾಗಿದ್ದರು. ಹಾಗೇ ಸೌಮ್ಯ ಸ್ವಭಾವದ “ಸೌಮ್ಯ”. ಆದರೆ ವಿಧಿಯಾಟ ಏನು ಎಂದು ಯಾರಿಗೂ ಅರಿಯಲು ಸಾಧ್ಯವಿಲ್ಲ. ಅವನೂ, ಅವಳೂ ಇಬ್ಬರೂ ರಾಜ್ಯಮಟ್ಟದ ಕ್ಯಾಂಪ್ ಗೆ ಆಯ್ಕೆಯಾದರು. ಅಲ್ಲಿಂದ ರಾಷ್ಟ್ರ ಮಟ್ಟಕ್ಕೂ ಆಯ್ಕೆಯಾದರು. ಆದರೆ ಅವಳು ರಾಷ್ಟ್ರಮಟ್ಟದ ಕ್ಯಾಂಪ್ ನಲ್ಲಿ ಭಾಗವಹಿಸಲಿಲ್ಲ.

ಒಂದು ಸಲ ಅವಳ ಅಪ್ಪ ಅವನ ಬಳಿ ಕೇಳಿದ್ದರು…. ನೀವು ಜೈನ ಸಮುದಾಯದವರಾ ಅಂತ. ಅಲ್ಲ ಅಂತ ಅವನು ಹೇಳಿದ್ದ. ಅವಳ ಅಮ್ಮನಿಗೂ ಅವನು ಇಷ್ಟವಾಗಿದ್ದ. ಅವರಿಗೂ ಅವನನ್ನು ತಮ್ಮ ಮಗಳಿಗೆ ಜೊತೆಗಾರನಾಗಿಸುವ ಆಲೋಚನೆಯಿದ್ದದ್ದು ಸತ್ಯ. ಆದರೆ ಅವರ ಕಣ್ಣುಗಳಲ್ಲಿದ್ದ ಅಸಹಾಯಕತೆಯನ್ನು ಗಮನಿಸಿ ಅವನು ಸುಮ್ಮನಾಗಿದ್ದ.
ಇಬ್ಬರೂ ಒಬ್ಬರನ್ನೊಬ್ಬರು ತುಂಬಾ ಹಚ್ಚಿಕೊಂಡುಬಿಟ್ಟಿದ್ದರು. ಕಾಫಿ, ತಿಂಡಿ, ಊಟ ಎಲ್ಲಾ ಒಂದೇ ತಟ್ಟೆ-ಲೋಟದಲ್ಲೇ ಮುಗಿಯುತ್ತಿತ್ತು. ಅವಳಿಗೂ ಅವನಂದ್ರೆ ತುಂಬಾ ಇಷ್ಟ, ಅವನಿಗೂ ಕೂಡಾ. ಆದರೆ ಸಮಯ ಕಳೆದಂತೆ ಅವಳ ಮಾತಿನಲ್ಲಿ ವ್ಯತ್ಯಾಸವಾಗತೊಡಗಿತು. “ನನಗೆ ನೀನಂದ್ರೆ ತುಂಬಾನೇ ಇಷ್ಟ, ಆದರೆ ನಾನೇನು ಮಾಡಲಿ…? ನಿರ್ಧಾರಗಳು ನನದಲ್ಲ ಇನ್ನು ಅಂದುಬಿಟ್ಟಳು. ಈಗಲೂ ಅವನ ಕಿವಿಯಲ್ಲಿ ಆ ಮಾತುಗಳು ಗುಂಯ್ ಗುಟ್ಟುತ್ತಿವೆ. ಹೃದಯವೇ ಒಡೆದು ಹೋಗುತ್ತಿದೆಯೇನೋ ಎಂದು ಅವನಿಗನಿಸಿತ್ತು. ಅವಳನ್ನು ಅವನು ದೂರಲಿಲ್ಲ. ಅವನಿಗೆ ಬದುಕಲು ಕಲಿಸಿದವಳು ಅವಳು, ಪ್ರತಿಯೊಂದರಲ್ಲೂ ಜೊತೆಯಾಗಿದ್ದವಳು. ಈಗಲೂ ಇದ್ದಾಳೆ ಜೊತೆಯಲ್ಲೇ ಭರವಸೆಯಾಗಿ, ಆತ್ಮವಿಶ್ವಾಸವಾಗಿ, ಇನ್ನೂ ಏನೇನೋ… ಆದರೆ ಪ್ರೀತಿಯಾಗಿ ಉಳಿಯಲು ಅವಳಿಂದ ಸಾಧ್ಯಾನೇ ಆಗಲಿಲ್ಲ.

ಹಲವಾರು ತಿಂಗಳುಗಳು ಉರುಳಿದವು… ತಡೆಯಲಾಗದೇ ಅವನೊಮ್ಮೆ ಆಕೆಗೆ ಕರೆ ಮಾಡಿದ. ಅವಳ ಮೊಬೈಲ್ ಸ್ವಿಚ್ ಆಫ಼್ ಆಗಿತ್ತು. ಕೊನೆಗೆ ಅವಳ ಅಮ್ಮನ ಮೊಬೈಲಿಗೆ ಕರೆಮಾಡಿದವನಿಗೆ ಸಿಡಿಲು ಬಡಿದ ಹಾಗಾಗಿತ್ತು. ನಿರ್ಧಾರಗಳು ನನದಲ್ಲ ಇನ್ನು ಅಂತ ಹೇಳಿದ್ದವಳು, ನಾನು ಯಾವತ್ತೂ ಅಪ್ಪ-ಅಮ್ಮನ ನಂಬಿಕೆಗೆ ದ್ರೋಹ ಮಾಡಲ್ಲ ಅನ್ನುತ್ತಿದ್ದವಳು ನಿರ್ಧಾರ ತೆಗೆದುಕೊಂಡುಬಿಟ್ಟಿದ್ದಳು…!!! ತನ್ನದೇ ಊರಿನವನೊಬ್ಬನೊಡನೆ ಯಾರಿಗೂ ಹೇಳದೆ-ಕೇಳದೆ ಮನೆ ಬಿಟ್ಟು ಓಡಿಹೋಗಿದ್ದಳು. ಆಕೆಗೆ ಹೆತ್ತವರ ಮೇಲಿದ್ದ ನಂಬಿಕೆಗೆ ಚ್ಯುತಿ ಬರದಂತೆ ನಡೆದುಕೊಂಡ ಅವನಿಗೆ ಅವಳ ನಂಬಿಕೆದ್ರೋಹದ ಆಘಾತ ಸಹಿಸಲು ಸಾಧ್ಯವೇ ಆಗಲಿಲ್ಲ. ಅವಳ ತಾಯಿ ಅವಳ ಕಥೆ ಹೇಳಿ ಜೋರಾಗಿ ಅತ್ತುಬಿಟ್ಟಿದ್ದರು. ಮಾತು ಮುಗಿಯುತ್ತಿದ್ದಂತೆ ಅವನ ಕಣ್ಣುಗಳು ತೇವವಾಗಿದ್ದವು. ತನ್ನ ಕಾವ್ಯ ಕನ್ನಿಕೆಯ ಸ್ಪೂರ್ತಿಯಾದವಳಿಗೆ ಎಲ್ಲಿದ್ದರೂ ಚೆನ್ನಾಗಿರು ಎಂಬ ಮೇಘ ಸಂದೇಶವನ್ನು ಕಳುಹಿಸಿ ಮೌನಿಯಾದ…

ನಾನು

ಚಾಮರವ ಬೀಸಿಹನು

ಗಗನವನೆತ್ತಿಹನು
ಮುರಳಿಯನು ನುಡಿಸಿಹನು
ಚಂದಿರನ ನಗಿಸಿಹನು
ಬದುಕಲು ಕಲಿಸಿಹನು
ಕಲ್ಪನೆಯಾಗಸದಲಿ ಲೀನವಾಗಿಹನು
ಯಾರವನು ಯಾರವನು ಕೇಳುತ್ತಿರುವಿರಾ…?
ಬೇರೆ ಯಾರೂ ಅಲ್ಲ, ನನ್ನೊಳಗಿನ ನಾನೇ

ಪ್ರಶ್ನೆ

ಪ್ರಶ್ನೆಗೊಂದು ಉತ್ತರ ಬೇಕಿದೆ

ಎಲ್ಲವ ಸಾಧಿಸಿದ ಸಾಧಿಸಹೊರಟಿರುವ ಮನುಜನಿಂದ
ಪ್ರಶ್ನೆಗೊಂದು ಉತ್ತರ ಬೇಕಿದೆ
ಎಲ್ಲವನು ತಿಳಿದವರಿಗೆ
ಮಿದುಳಿನಲೇನಿದೆ ಎಂದು ತಿಳಿಯಲಾಗಿಲ್ಲ
ಯಾವ ವಿಷಯವಡಗಿದೆ ಗೊತ್ತಿಲ್ಲ
ಏನು ಸಾಧಿಸಿದರೆ ಏನು
ಸತ್ತ ಮೇಲೆ ಅದೊಂದು ಮಾಂಸದ ಮುದ್ದೆ
ಬದುಕಿರುವವರೆಗಿನ ಸಾಧನೆ ಶೂನ್ಯ

ಕಲ್ಪನೆ

ಎಲ್ಲಿಹರು ನನ್ನವರು ಎಲ್ಲಿಹುದು ಆಧಾರ

ದಿಕ್ಕು ತಪ್ಪಿದ ಹಾದಿಯಲಿ ಒಂಟಿಯಾಗಿಹೆ ನಾನು
ಭರವಸೆಯ ನುಡಿಯಿಲ್ಲ ಸಾಂತ್ವನದ ನಿರೀಕ್ಷೆಯಿಲ್ಲ
ಎಲ್ಲವೂ ಗಗನ ಕುಸುಮದಂತೆ
ಎಲ್ಲಿ ಹುಡುಕಲಿ ನನ್ನವರ ಬದುಕು ಕಟ್ಟಿಕೊಟ್ಟವರ
ಸಮರಸದ ತುತ್ತ ಉಣಿಸಿದವರ ಬ್ರಾತೃತ್ವದ ಸೆಲೆಯಾದವರ
ಕಾಣಲಾರೆನು ಆ ದಿವ್ಯಪುಂಜಗಳ
ಯಾರು ಮರೆಯಾಗಿಸಿದರು ಅನ್ವೇಷಿಸಿ ಹೇಳುವಿರಾ?
ಹೇಳಲಾರಿರಿ ಏಕೆಂದರೆ ಅದು ಬರೀ ನನ್ನ ಕಲ್ಪನೆ
ಕಲ್ಪನೆಯನು ಕೆದಕಲು ಸಾಧ್ಯವೇ…?

ನಿಯಂತ್ರಣವೆಂಬ ಜಗಲಿಯಲ್ಲಿ…

ಎಲ್ಲೆಡೆಯೂ ಹರಡಿದ್ದು ಕೊನೆಗೊಮ್ಮೆ ಕರಗಿ ನೀರಾಗುವ ಆಕಾಶದಲ್ಲಿನ ಮೋಡದಂತೆ ಮನಸು ಕೂಡ. ಕಾರ್ಮುಗಿಲಿನಂತಹ ಸಮಸ್ಯೆಗಳಿದ್ದರೂ, ಬದುಕುವ ಛಲ ಇರುವವರಿಗೆ ಅದರಿಂದ ಹೊರಬರಲು ಕಷ್ಟವಾಗದು. ಗುರಿಯನ್ನು ಹುಡುಕುತ್ತಾ ಹೊರಟವನಿಗೆ ಗುರಿಮುಟ್ಟಲೇಬೇಕೆಂಬ ಛಲವಿದ್ದರೆ ಯಾವುದೇ ಅಡೆತಡೆಯೂ ಕಷ್ಟವೆನಿಸದು.

ಎಲ್ಲದರಲ್ಲಿಯೂ ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಂಡು, ಸ್ಥಿರ ನಿರ್ಣಯಗಳನ್ನು ತೆಗೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಬೇಕು. ನಿರೀಕ್ಷೆ, ಭರವಸೆ, ಕಾಯುವಿಕೆ ಯಾವತ್ತಿಗೂ ಕೂಡ ಹುಸಿಯಾಗುವ, ಹುಸಿಯಾಗಿಸುವ ವಿಚಾರಕ್ಕಾಗಿ ಮೀಸಲಿಡಬಾರದು. ಮನಸ್ಸು ಪ್ರಶಾಂತವಾದಾಗ ಇವೆಲ್ಲವನ್ನು ಸ್ವಲ್ಪಮಟ್ಟಿಗೆ ಮುಂಚಿತವಾಗಿ ಗೃಹಿಸಲು ಸಾಧ್ಯವಾಗುತ್ತದೆ. ಸರಿಯಾದ ಆಹಾರ, ನಿದ್ರೆ, ಯೋಗ, ಪ್ರಾಣಾಯಾಮಗಳು ಮಾನಸಿಕ ಚಾಂಚಲ್ಯವನ್ನು ತೊಡೆದು ಮನಸ್ಸನ್ನು ನಿಯಂತ್ರಣದಲ್ಲಿಡುವುದರ ಜೊತೆಗೆ ಇಡೀ ಶರೀರವನ್ನು ನಿಯಂತ್ರಿಸುತ್ತದೆ.

ಪ್ರೀತಿ-ಪಲ್ಲಕ್ಕಿ

ಎಲ್ಲ ಹಾದಿಯ ನಡುವೆ ನಿನ್ನದೇ ನೆನೆಪುಗಳು

ಎಲ್ಲ ನೆನಪುಗಳಲ್ಲಿ ನಿನ್ನದೇ ಪಿಸುಮಾತುಗಳು

ಭಾವಪರವಶನಾಗಿ ನಿನ್ನ ನಾ ಸೇರಿದ್ದೆ
ಬದುಕ ಕೊನೆವರೆಗೆಂದು ಸಾರಿ ನಾ ಹೇಳಿದ್ದೆ
ವಿಧಿ ಹೆಗಲೇರಿತು ಹೃದಯ ಚೂರಾಯಿತು
ಕನಸುಗಳ ಪಲ್ಲಕ್ಕಿ ಧರೆಗುರುಳಿತ್ತು

ಏಳು ಬೀಳಿನ ಹಾದಿಯಲಿ ನಿನ್ನ ನಾ ಬಯಸಿದ್ದೆ
ಶಾಶ್ವತತೆಯಲ್ಲಿ ನಿಂತು ಸಂತಸದಿ ನಲಿದಿದ್ದೆ
ಕಣ್ಣು ಮಂಜಾಗಿ ಪೊರೆ ಆವರಿಸಿತ್ತು
ಕಣ್ಣೀರ ಧಾರೆ ಪ್ರವಾಹ ಎದ್ದಿತ್ತು

ನೆಲೆನಿಂತ ಮನಸ ನಾ ಬಡಿದೆಬ್ಬಿಸಿದೆ
ಭಾವದ ಹರಿವಿನಲಿ ತೇಲಾಡಿದೆ ನಾ
ಹುಲ್ಲುಕಡ್ಡಿಯಾಧಾರ ಸಿಗಲಿಲ್ಲ ಕೊನೆಗೂ
ಕಳೆದುಹೋದೆನು ಪ್ರೇಮಪಾಶದ ಜಲಧಿಯಲಿ

ತೊಟ್ಟಿಲು

ಮನವೆಂಬ ತೊಟ್ಟಿಲಲಿ
ತೂಗಾಡುತ್ತಿವೆ ರಸ ನಿಮಿಷಗಳು
ಎಷ್ಟು ತೂಗಿದರೂ ಮರೆಯಾಗಲೊಲ್ಲೆವೆಂದು
ಇನ್ನೂ ಎಚ್ಚರಾಗಿವೆ ಅಳುತ್ತಾ…

ನಿಯಂತ್ರಣವೆಂಬ ಲಾಲಿಯಿದ್ದರೂ
ಭಾವನೆಗಳೆಂಬ ಹಾಲೆರೆಯುತ್ತಿದ್ದರೂ
ನಿದ್ರಿಸುತ್ತಿಲ್ಲ ಅವು ಎಷ್ಟು ಹೇಳಿದರೂ
ಇನ್ನೂ ಎಚ್ಚರಾಗಿವೆ ಅಳುತ್ತಾ…

ಯಾವಾಗಲೊಮ್ಮೆ ತೂಕಡಿಸಿತೋ
ಆಗಲೇ ಕನಸುಗಳ ಕಲರವ
ಎಚ್ಚೆತ್ತು ಬಿಡುತ್ತವೆ ತೊಟ್ಟಿಲಿನಲಿ ಬಯಕೆಗಳು
ಇನ್ನೂ ಎಚ್ಚ್ರರಾಗಿವೆ ಅಳುತ್ತಾ…

ಸಾರ್ಥಕತೆ ಪಡೆದಾಗಿನ ಆನಂದ
ಕೆಲವನ್ನು ಮರೆಯಾಗಿಸುತ್ತಿತ್ತು
ಸಾರ್ಥಕ್ಯದ ತತ್ಕಾಲತೆಯಿಂದ ಎಚ್ಚೆತ್ತು
ಇನ್ನೂ ಎಚ್ಚರಾಗಿವೆ ಅಳುತ್ತಾ…

ಕಡಲು

ಯಾರು ಬಲ್ಲರು ಹೇಳಿ ಕಡಲ ಒಡಲನು 
ಯಾರು ಅರಿಯರು ಇದರ ಅಗಾಧತೆಯನು
ದೃಷ್ಟಿ ಬೀರುವವರೆಗೆ ಕೊನೆಯಿಲ್ಲದ ಎಲ್ಲೆ
ಮುಳುಗಿದರೂ ಸಿಗದ ತಳದ ಮರಳು

ಸಹಸ್ರ ಜೀವಸಂಕುಲವ ತನ್ನುದರದೊಳಗಿರಿಸಿ
ಅನುಕ್ಷಣವೂ ತೆರೆಗಳಲಿ ಜೋಕಾಲಿಯಾಡಿಸಿ
ಇಹದ ಭಯವನೆಲ್ಲ ಕಳೆಯಿಸಿ
ತನುವಿನ ಕೊಳೆಯನೆಲ್ಲ ತೊಳೆಯಿಸಿ

ಕಡಲ ಅರಿತವಗೆ ವೈಶಾಲ್ಯತೆಯ ಅರಿವು
ಮರೆತು ದುಡುಕಿದರೆ ಪ್ರಾಣಕ್ಕೆ ಎರವು
ಪ್ರತಿಯೊಂದು ಅಂಶವೂ ಒಂದೊಂದು ಸೂಚನೆ
ಅದರಲೆಗಳಂತೂ ಸಹಸ್ರ ಮಾತುಗಳ ರಚನೆ

ಶಾಂತವಾಗಿದ್ದರೂ ಕೆಲವೊಮ್ಮೆ ಭೋರ್ಗರೆತ
ಬೇಕೆನಿಸಿದುದನು ಪಡೆಯುವುದು ಖಚಿತ
ಗರ್ಭದಲಿ ಅಡಗಿಸಿದೆ ಎಷ್ಟೋ ಸತ್ಯಗಳನು
ಅವುಗಳಲಿ ಕಹಿಯೆಷ್ಟೋ ಸಿಹಿಯೆಷ್ಟೋ

ನಂಬಿ ಕೂತವಗೆ ಅನ್ನದಾತನೆನಿಸಿ
ಹೊಟ್ಟೆ ಹೊರೆಯಲು ದುಡಿಮೆಯ ಕಲಿಸಿ
ಬದುಕು ಬೆಂಗಾಡಾಗದಿರಲು ಪೊರೆಯುತ್ತಾ
ಸಲಹುತ್ತಿದೆ ಸಕಲ ಜೀವರಾಶಿಯ ನಿರಂತರ

ಅಸಹಾಯಕತೆ

ಪ್ರೀತಿಯ ಸ್ಪರ್ಶದಲಿ
ಮನಃಪಟಲದಿ ಮೂಡಿದ ಚಿತ್ತಾರದಿ
ಕ್ಷಣ ಕ್ಷಣವೂ ಕಾಡುತ್ತಿದೆ ಆ ನೆನಪು
ಪ್ರತಿ ಕ್ಷಣವೂ ವರುಷ ಕಳೆದಂತೆ
ಮಂದತೆಯಿಂದ ಸರಿಯುತ್ತಿದೆ

ಉತ್ತರದ ಶೋಧದಲಿ
ಬಸವಳಿದು ದಣಿದು
ಕಾಯುತ್ತಿದ್ದರೆ ತಾಳ್ಮೆಯ ಮನಸ್ಸು
ಅಲ್ಲೊಂದು ಮೂಲೆಯ ಜರಡಿಯಲಿ
ಧೂಳಾಗಿ ದೊರೆತ್ತಿತ್ತು ಈ ಪ್ರೀತಿ

ತುಲನೆ ನಡೆಸಲು ಅಸಹಾಯಕವಾಗಿ
ಬಸವಳಿದಿದೆ ಆ ಪುಟ್ಟ ಮನಸು
ಅಂತರಾತ್ಮದ ಭರವಸೆಯ ಸ್ಪಷ್ಟತೆಗಾಗಿ
ಇದಿರು ನೋಡುತ್ತಿದೆ ಕನಸೊಂದು
ನಿಶ್ಚಿತತೆ ಎಂದ ಕೂಡಲೇ ಪುಕ್ಕ ಕಟ್ಟಲು

ಕನಸು ನನಸುಗಳ ಮಧ್ಯ ಕಂದರದಿ
ಕೇಳಿದೆ ನಾ ಆ ಆರ್ತನಾದವನು
ಬದುಕು ಶಾಶ್ವತವಲ್ಲ ಬಾಂಧವ್ಯ ಶಾಶ್ವತವೆಂದು
ಅನುಕ್ಷಣವೂ ಮರಣಿಸುತ್ತಿವೆ ಭಾವನೆಗಳು
ಮುಂದುವರಿಕೆಯ ಸೂಚನೆಯೊಂದಿಗೆ…


ಪಯಣ

ಜನ್ಮ ತಾಳಿದ ಕ್ಷಣದಿಂದ
ಹೊಸ ಜೀವ ಸೆಲೆಯಾಸರೆಯಲಿ
ಕ್ಷಣ ಕ್ಷಣವೂ ನಿರ್ಭಿಡೆಯಿಂದ
ಸಾಗುತ್ತಿದೆ ಬದುಕಿನ ಈ ಪಯಣ

ತಾಯ ಉದರದಿಂದ ಲೋಕದೆಡೆಗೆ ಪಯಣ
ಬಾಲ್ಯದಲ್ಲಿ ಮುಗ್ದತೆಯ ಜೊತೆ ಪಯಣ
ಯೌವನದಲಿ ಛಲದ ಹಾದಿಯಲಿ ಪಯಣ
ವೃದ್ಧಾಪ್ಯದಿ ಮುಕ್ತಿ ಪಥದೆಡೆಗೆ ಪಯಣ

ಬದುಕಿನ ಪಯಣವದು ಸಿಹಿ ಕಹಿಯಂತೆ
ನಿಂತು ನಿಂತು ತಡವರಿಸಿ ಮತ್ತೆ ಸಾಗುತ್ತದೆ
ಅನುಭವದ ಮೇರೆಯನು ಮೀರಿ ಹೋಗುತ್ತದೆ
ಗುರಿಯ ಬಿಂದುವನು ತಾಕಿ ನಿಲ್ಲುತ್ತದೆ

ಯಾರು ಅರಿಯರು ಈ ಪಯಣದ ಕೊನೆಯೆಲ್ಲೆಂದು
ಸಾರ್ಥಕತೆಯೆಂಬ ಗುರಿಯ ಧ್ರುವವೆಲ್ಲೆಂದು
ಕನಸ ಗರ್ಭದಲಿ ಮಿಂಚಿ ಮರೆಯಾಗುವ
ಪಯಣದ ಮೂಲ ಉದ್ದೇಶ ಏನೆಂದು…?

ಹುಡುಕಿರುವೆ ಎದೆ ಕವಾಟವ ತೆರೆದು
ಶೋಧಿಸಿದೆ ಪ್ರತಿ ವಸ್ತುವ ತೆಗೆದು ಬದಿಗಿರಿಸಿ
ಎಲ್ಲಿವರೆಗೆ ಈ ಪಯಣ ಸಾಗುವುದೆಂದು
ಬದುಕೆಂಬ ಪಯಣದ ಅಂತ್ಯವೆಲ್ಲಿಯೆಂದು

ನನ್ನವಳಾಗಿದ್ದವಳಿಗೊಂದು ಬಹಿರಂಗ ಪತ್ರ

ಓ ನನ್ನ ಕಾವ್ಯ ಕನ್ನಿಕೆ… ನೀನಿಲ್ಲದೆ ಎಷ್ಟೋ ರಾತ್ರಿಗಳನ್ನು ಕಳೆದುಬಿಟ್ಟಿದ್ದೇನೆ. ಅದ್ಯಾಕೋ ಮನಸ್ಸು ಸಹಿಸುತ್ತಿಲ್ಲ ನೀನಿಲ್ಲದ ಕ್ಷಣಗಳನು.., ಯಾಕೋ ಏನೋ ನನ್ನ ಮನದ ಜೋಕಾಲಿ ಅನಾಥವಾಗಿ ಹೋಗಿದೆ. ನೀ ಬರುವಿಯೆಂದು ಇನ್ನೂ ಅದನ್ನು ಬಿಚ್ಚದೆ ಇಟ್ಟಿದ್ದೇನೆ. ನೀನಂದು ಕೊಟ್ಟ “ಉಡುಗೊರೆ”ಯನ್ನು ಪ್ರತಿ ದಿನವೂ ಮನಸ್ಸಿನಾಳದಿಂದ ತೆಗೆದು ನೋಡುತ್ತೇನೆ. ನಿನ್ನ ಇರುವಿಕೆ ಇಲ್ಲದ್ದಿದ್ದರೂ ಇದ್ದಂತೆ ಭಾಸವಾಗುವುದು ಅದರಿಂದಾಗಿ ಮಾತ್ರ. ಅದು ಕಲ್ಪನೆಯೆಓದು ತಿಳಿದಾಗ ಜೋರಾಗಿ ಅಳಲು ಪ್ರಯತ್ನಿಸುತ್ತೇನೆ… ಆದರೆ ಕಣ್ಣೀರೇ ಇಲ್ಲದ ಕಂಗಳಿಂದ ಹೇಗೆ ಅಳಲಿ..? ವಿಚಿತ್ರ ಅಲ್ವಾ? ಆದರೂ ಸತ್ಯ. ನಿನ್ನನ್ನು ಮೊದಲ ನೋಡಿದಾಗ ಕನಸ ಗೋಪುರಗಳನ್ನೆಲ್ಲಾ ಕಟ್ಟಿಕೊಂಡ್ಡಿದ್ದೆ. ಆಗ ನನಗೇನು ತಿಳಿದಿತ್ತು.., ಅದೆಲ್ಲ ಬರಿಯ ಗಾಳಿಗೋಪುರಗಳೆಂದು…?

ನಿನ್ನ ಮನದಲ್ಲಿ ನನ್ನ ಸ್ಥಾನ ಎಲ್ಲಿಯೆಂದು ತಿಳಿಯುತ್ತಿಲ್ಲ. ಆದರೂ ಅದರೊಳಗೆ ಬರಲು ಪ್ರಯತ್ನಿಸುತ್ತಿದ್ದೇನೆ… ಏನು…?!!! ಬರಬೇಡಾ ಅಂತಿದ್ದೀಯಾ? ಸರಿ ನಿನ್ನಿಷ್ಟ. ಆದರೆ ನನ್ನ ಮರೆತು ಬಿಡಬೇಡ. ನೀನಂದ್ರೆ ನನ್ಗೆ ತುಂಬಾನೇ ಇಷ್ಟ… ನೀನೇನಂದೆ…? “ನಿರ್ಧಾರಗಳು ನನದಲ್ಲ ಇನ್ನು” ಅಂತ ತಾನೇ..? ಆಯ್ತು ಬಿಡು. ನಿನ್ನ ನಿರ್ಧಾರ ಶಾಶ್ವತ ಅಲ್ಲ ಅಂತಾದ್ರೆ ನನ್ನ ಯಾಕೆ ಪ್ರೀತಿಸಿದೆ.? ಸುಮ್ನೆ ತಮಾಷೆ ಮಾಡೋಣಾ ಅಂತ ಅಂದ್ಕೊಂಡಿಯಾ.? ಕಷ್ಟ ಕಣೇ, ಪ್ರೀತಿ ಎಂಬ ಎರಡಕ್ಷ್ರರದ ಜಾಗಕ್ಕೆ ಸ್ನೇಹ ಸೇರಿಸುವುದಕ್ಕೆ…

ನಿನಗಿದೆಲ್ಲ ಅರ್ಥ ಆಗಲ್ಲ. ಯಾವತ್ತೂ ನನ್ನೇ ಹಳಿಯುತ್ತಿರುತ್ತೀಯಲ್ಲಾ.? ಈಗ್ಯಾಕೆ ನನ್ನ್ ಪುನಃ ಕಾಡುತ್ತಿದ್ದೀ..? ಬೇಡ ಕಣೇ, ಈ ಜೀವನವೇ ವ್ಯರ್ಥ ಅಂತ ಅನಿಸುತ್ತಿದೆ. ಇನ್ನೊಮ್ಮೆ ಕಾಡಿಸ್ಬೇಡ. ಇನ್ಯಾವತ್ತೂ ನಿನ್ನ ಹುಡುಕೋ ಪ್ರಯತ್ನ ಮಾಡೋದಿಲ್ಲ. ನೀ ಎಲ್ಲೇ ಇದ್ದರೂ ಹೇಗೇ ಇದ್ದರೂ ಸಂತೋಷದಿಂದಿರು, ಆದರೆ ನನ್ನ್ “ಸ್ನೇಹ” ಮಾತ್ರ ನಿನಗೆ ದೊರಕದ ಮರೀಚಿಕೆ.

ಕನಸು ಕಟ್ಟುವ ಮೊದಲೇ ತೆರೆಮರೆಗೆ ಸರಿದು ಹೋಗುತ್ತೀಯೆಂದು ಅಂದುಕೊಂಡಿರಲಿಲ್ಲ. ವಿಧಿ ಎಷ್ಟೊಂದು ಕ್ರೂರ ಅಲ್ವಾ.? ನಿಜಕ್ಕೂ ನನ್ಗೆ ಆ ವಿಧಿಯ ಮೇಲೆ ಹುಚ್ಚು ಪ್ರೀತಿ. ಒಂದು ದಿನ ಆ ವಿಧಿಯ ನಿರ್ಣಯಗಳನ್ನು ಬುಡಮೇಲುಗೊಳಿಸಿ ನನ್ನದೇ ಪ್ರಪಂಚವನ್ನು ಸೃಷ್ಟಿಸಿಕೊಳ್ಳುತ್ತೇನೆ. ಅಬ್ಭಾ… ಎಂತಹಾ ಘೋರ ಅಲ್ವಾ ಈ ಏಕಾಂಗಿತನ…? ಅದೂ ಧೀರ್ಘವಾಗಿದ್ದಷ್ಟೂ ಗೊಂದಲಗಳನ್ನು ಸೃಷ್ಟಿಸುತ್ತಲೇ ಇರುತ್ತದೆ.

ಯಾಕೋ ಅರಗಿಸಿಕೊಳ್ಳಲೇ ಸಾಧ್ಯವಾಗುತ್ತಿಲ್ಲ ಇನ್ನೂ, ನೀನ್ಯಾಕೆ ಹೀಗಾದೆಯೆಂದು..? ನಾನು ಸಂತೋಷದಿಂದಿದ್ದೆ. ನನ್ನ ಜೀವನದಲ್ಲಿ ಸೆಳೆತದ ಪ್ರೀತಿಯ ಆಗಮನವಾಗಲೇಬರದಿತ್ತು. ಆದರೂ ಬಂತು. ಮತ್ತೆ ಮರೆಯಾಯಿತು. ಅದೊಂಥರಾ ಕಣ್ಣಾ ಮುಚ್ಚಾಲೆ ಆಟ. ಯಾಕೋ ಸಾಕಾಗಿ ಹೋಯಿತು ಕಣೇ. ಮನದ ಭಾವನೆಗಳನ್ನು ನಿಗ್ರಹಿಸಿಕೊಂಡು ನನ್ನ ಬೆಳವಣಿಗೆಯನ್ನು ಹಂತ ಹಂತವಾಗಿ ಮುಂದುವರಿಸಿಕೊಂಡು ಹೋಗುತ್ತಿದ್ದೇನೆ. ಏನಾದರೂ ಸರಿ ಇನ್ನೊಮ್ಮೆ ಬಲಿಯಾಗೋದಿಲ್ಲ ಈ ಪ್ರೀತಿಯ ಮೋಹಕ ಬಲೆಗೆ ಅಂದುಕೊಂಡೆ. ಆದರೆ ನನ್ನ ಮನಸ್ಸು ಎಚ್ಚರಿಸಿತು. ಪ್ರೀತಿ… ಅದು ಬರೀ ಹುಚ್ಚಲ್ಲ. ಅದೊಂದು ಅನುಬಂಧ. ಶಾಶ್ವತತೆಯ ಆರಂಭ ಎಂದು.

ನನ್ನ ಮನಸ್ಸಿನ ಮಾತುಗಳಿಗೆ ಸೋತು ಮರಳಿ ಬರುತ್ತಿದ್ದೇನೆ. ಆದರೆ ಎಲ್ಲೂ ನನ್ನ ಕಣ್ಣಿಗೆ ಬೀಳಬೇಡ. ನನ್ನ ಮನಸ್ಸು ಮತ್ತೆ ಸಹಿಸೋ ಸ್ಥಿತಿಯಲ್ಲಿಲ್ಲ. ಇನ್ನೆಂದಿಗೂ ನನ್ನ ಕಾಡಬೇಡ. ಸ್ವಚ್ಛಂದವಾಗಿ ಹಾರಾಡುತ್ತಿರುತ್ತೇನೆ. ಕತ್ತರಿಸಬೇಡ ನನ್ನ ಆನಂದಭರಿತ ಕ್ಷಣದ ರೆಕ್ಕೆಗಳನು… ಹಾಗೇ ಮರೆಯಾಗಿಬಿಡು ಸುಮ್ಮನೆ, ನನ್ನ ದಾರಿಗೆ ಬೆನ್ನು ಹಾಕಿ…

ಇಂತಿ ನಿನ್ನ ಭರವಸೆಯಾಗಿದ್ದವ
ವಿವೇಕ್…

ಹೊಸ ರಾಗ

ಭರವಸೆಯ ಸಾಗರದಿ

ಕಡಲಲೆಯ ಜೋಗುಳದಿ

ನಿದ್ರಿಸಿದೆ ನಾ ಪ್ರಶಾಂತವಾಗಿ

ಭಾವ ತುಂಬಿದ ಮನಸು

ಜೀವ ತುಂಬಿದ ಕನಸು

ಕಾಯುತ್ತಿದೆ ಆ ಸಾಮಿಪ್ಯಕ್ಕಾಗಿ


ಭಾವದೊಡಲು ಬಗೆದು

ಮೊಗೆದು ಕುಡಿದ ಪ್ರೇಮ

ಮನದಾಳಕಿಳಿದು ಬಸಿದು

ಚಿಂತಿಸಿದ ಆ ಜಾಮ

ಕನಸು ಕಟ್ಟುವ ಮೊದಲೇ ಇತ್ತು

ಮನಸು ಮುರಿವ ಕಿಡಿ ಮಾತು


ಹುಣ್ಣಿಮೆಯ ಬೆಳ್ಳಿ ಆಗಸದಿ

ಮಿನುಗಿ ಸರಿದ ಚಂದಿರನ ಕಾಂತಿ

ನೈದಿಲೆ ಹರ್ಷಿಸಿತು ಮುದದಿ

ತನ್ನಿನಿಯನ ಬರುವಿಕೆಗಾಗಿ

ಬಯಕೆ ಮೂಟೆ ಹೊತ್ತ ಬದುಕಲಿ ಆಗ

ಚಿಮ್ಮಿ ಬರುತ್ತಿತ್ತು ಹೊಸರಾಗ

ಸಾಹಿತ್ಯ

ಸಾಹಿತ್ಯ ಎನ್ನುವುದು ನಮ್ಮ ಮನಸ್ಸುಗಳನ್ನು ಬೇರೆ ಬೇರೆ ಪ್ರಕಾರಗಳ ಮೂಲಕ ಸುಸ್ಥಿತಿಯಲ್ಲಿಡುವ ಮಾದ್ಯಮ. ಕಥೆ, ಕಾದಂಬರಿ, ವಿಮರ್ಶೆ, ಲೇಖನ, ಕವನ, ಹಾಸ್ಯ, ಪ್ರಬಂಧ, ನಾಟಕ, ರೂಪಕ, ರಂಗ ಗೀತೆ, ಕಾವ್ಯ, ಸಿನೆಮಾ ಹೀಗೆ ಹತ್ತು ಹಲವು ಪ್ರಕಾರಗಳ ಮೂಲಕವಾಗಿ ಜನರನ್ನು ತಲುಪುವ ಮಾದ್ಯಮವಾದ ಸಾಹಿತ್ಯ ಅವರವರ ಅಭಿರುಚಿಗೆ ತಕ್ಕಂತೆ ಉಣಬಡಿಸುತ್ತದೆ. ಅಕ್ಷರಸ್ಥರಾದರೂ, ಅನಕ್ಷರಸ್ಥರಾದರೂ, ಎಲ್ಲರಿಗೂ ಅರ್ಥವಾಗುವಂತೆ ಸಾಹಿತ್ಯವನ್ನು ವಿಭಿನ್ನತೆಗಳಲ್ಲಿ ಜೋಡಿಸಿಕೊಂಡಿರುವುದು ಮಾನವನ ಬೆಳವಣಿಗೆಯನ್ನು ಪ್ರತಿಬಿಂಬಿಸುತ್ತದೆ.

ಅನಾದಿ ಕಾಲದಿಂದಲೂ ಸಾಹಿತ್ಯಕ್ಕೆ ದೊರಕಿದಷ್ಟು ಮನ್ನಣೆ ಬೇರಾವುದಕ್ಕೂ ಸಿಕ್ಕಿರಲಿಕ್ಕಿಲ್ಲ. ಹಲವಾರು ರಾಜರ ಆಥಿತ್ಯದಲ್ಲಿ ಬೆಳೆದ ಹಲವಾರು ಕವಿಗಳು, ವಿದ್ವಾಂಸರುಗಳನ್ನು ಪಟ್ಟಿಮಾಡುತ್ತಾ ಹೋದರೆ ಕೊನೆಯೇ ಇಲ್ಲವೇನೋ…! 

Kalidasa

 

ಮಹಾಭಾರತವನ್ನು ಕಾವ್ಯಮಯವಾಗಿಸಿದ ಆದಿಕವಿ ಪಂಪ, ಕವಿ ಚಕ್ರವರ್ತಿ ರನ್ನ, ಕುಮಾರವ್ಯಾಸ, ಅರ್ಥಶಾಸ್ತ್ರವನ್ನು ಸಾಹಿತ್ಯ ರೂಪಕ್ಕಿಳಿಸಿದ ಕೌಟಿಲ್ಯ, ಈಗಿನ ಎಸ್ಸೆಮ್ಮೆಸ್ಸ್ ನ ಪೂರ್ವ ರೂಪವನ್ನು ಪ್ರತಿಬಿಂಬಿಸುವ ಕಾಳಿದಾಸನ ಮೇಘಸಂದೇಶ, ಹೀಗೆ ಹಲವಾರು ವಿಶೇಷಣಗಳಿಂದ ಕೂಡಿದ ಸಾಹಿತ್ಯವನ್ನು ನೀಡಿದವರು ಒಂದೆಡೆಯಾದರೆ, ಹಾಸ್ಯದ ಮೂಲಕ ವೈಚಾರಿಕ ಮೌಲ್ಯದ ಪರಿಚಯ ಹಾಗೂ ಅದರ ಸಾರವನ್ನು ತೆರೆದಿಡುತ್ತಿದ್ದ ತೆನಾಲಿರಾಮ, ತಿಮ್ಮರಸ, ಬೀರಬಲ್ಲರಂತಹ ಮೇಧಾವಿಗಳು ಮತ್ತೊಂದೆಡೆ ನಿರಂತರವಾಗಿ ಸಾಹಿತ್ಯದ ಪ್ರವಹಿಸುವಿಕೆಗೆ ಶ್ರಮಿಸುತ್ತಲೇ ಇದ್ದವರು.ಇವರೆಲ್ಲರ ಜೊತೆ ವಿದೇಶೀ ಯಾತ್ರಿಕರು, ಪ್ರವಾಸಿಗರು ಈ ಎಲ್ಲಾ ಸಾಹಿತ್ಯ ಭಂಡಾರವನ್ನು ತಮ್ಮ ಜೊತೆಗೆ ತರ್ಜುಮೆಗೊಳಿಸಿಕೊಂಡು ಹೋದರು. ಹೀಗೆ ಸಾಹಿತ್ಯದ ಬೆಳವಣಿಗೆಯಾಯಿತು. ಜಗತ್ತಿನ ಹಲವಾರು ಕೃತಿಗಳು, ನಾಟಕಗಳು, ಕಾವ್ಯಗಳು ನೂರಾರು ಭಾಷೆಗಳಿಗೆ ಅನುವಾದಗೊಳಿಸಲ್ಪಟ್ಟವು. ಬೇರೆಲ್ಲಿಯಾದರೂ ಗಡಿ ಸಮಸ್ಯೆ ಇದ್ದರೂ ಸಾಹಿತ್ಯಕ್ಕೆ ಅದರ ಪರಿವೆಯೇ ಇರಲಿಲ್ಲ. ಆದರೆ ಇಂದು ಸಂವಿಧಾನದಲ್ಲಿನ ಅಭಿವ್ಯಕ್ತಿ ಸ್ವಾತಂತ್ರ್ಯದ ಮುನ್ನುಡಿಗೆ ಅರ್ಥವೇ ಇಲ್ಲದಂತಾಗಿದೆ. ಸಾಹಿತ್ಯ ಎಲ್ಲಾ ಕಟ್ಟಳೆಗಳಿಂದ ಹೊರತಾಗಿದ್ದರೆ ಒಳ್ಳೆಯದು. ಇಲ್ಲದ್ದಿದ್ದರೆ ಸಾಹಿತ್ಯದಲ್ಲಿ ಕಲ್ಮಶಗಳು ತೇಲಿಬಂದು ಅದರಲ್ಲಿನ ರಸಾಸ್ವಾದನೆಯ ಸುಗಂಧವನ್ನು ಹೊಡೆದೋಡಿಸಲಿವೆ. ಇದನ್ನು ಎದುರಿಸಲು ಪೂರ್ವಸಿದ್ಧತೆಯ ತಳಹದಿಯನ್ನು ನಿರ್ಮಿಸಬೇಕಾಗಿದೆ. ಅದಕ್ಕಾಗಿ…

ಕಟ್ಟೋಣ ಭದ್ರ ತಳಹದಿಯ

ಸಾಹಿತ್ಯವೇರಲಿ ಆ ಬುನಾದಿಯ ಮೇಲೆ

ಎಂದಿಗೂ ಅಲುಗದಿರಲಿ ತಳಹದಿ

ಸ್ಥಿರತೆಯ ಸಾರುವ ಭವ್ಯತೆಯ ಹೊತ್ತುಕೊಂಡು

ಅದಕ್ಕಾಗಿ ನನ್ನದೊಂದು ವಿನಂತಿ. ಸಾಹಿತ್ಯವನ್ನು ಉಳಿಸಿ, ಬೆಳೆಸಿ, ಪೋಷಿಸುವ ಹೊಣೆಗಾರಿಕೆ ನಮ್ಮ ಹೆಗಲ ಮೇಲಿದೆ. ಈ ಉದ್ದೇಶದ ಸಾಫಲ್ಯಕ್ಕಾಗಿ ಶ್ರಮಿಸೋಣ. ಭವ್ಯ ಭಾರತದ ಹಿರಿಮೆಗೆ ಸಾಕ್ಷಿಯಾಗಿರುವ ಸಾಹಿತ್ಯದ ಪ್ರವಾಹವನ್ನು ಯಾರಿಗೂ ಒಡ್ಡುಕಟ್ಟಿ ನಿಲ್ಲಿಸಲಾಗದಂತೆ ಪ್ರವಹಿಸಲು ಶ್ರಮಿಸೋಣ.

ಉತ್ತರ

ಪ್ರೀತಿಯೆಂದರೇನೆಂದೇ ಅರ್ಥವಾಗುತ್ತಿಲ್ಲ

ಚಿನ್ನದ ಪಂಜರವೋ ವಜ್ರದ ಗಾಳವೋ…?

ಬಹುಷಃ ಅದು ಕುಣಿಕೆಯಾಗಿರಬಹುದೇ…?

ಇಲ್ಲಾ ಕೊರಳಿಗೇ ಉರುಳಾಗಿರಬಹುದೇ…?

ಕಾಯುವಿಕೆ ಪ್ರೀತಿಯೋ…?ಮತ್ತೆ ಕಾಯಿಸೋದು ಪ್ರೀತಿಯೋ…?

ಅರ್ಥವೇ ಆಗುತ್ತಿಲ್ಲ ಹಿಂಸೆಯೂ ಅನಿಸುತ್ತಿಲ್ಲ

ಮನಸು ಮಾತ್ರ ತುಸು ಭಾರವೆನಿಸಿದೆ

ಕ್ಷಣವೆಲ್ಲಾ ಧೀರ್ಘವಾಗಿ ಕಾಡುತ್ತಿದೆ

ಉತ್ತರವಿಲ್ಲದ ಪ್ರಶ್ನೆಗಳಿಗೆ ಅವಕಾಶವಿತ್ತಿದೆ

ಆದರೂ ಸಿಗಬಹುದೇನೋ ಪ್ರ‍ೀತಿಗೆ ಉತ್ತರ

ಪಂಜರವೋ ಗಾಳವೋ ಕುಣಿಕೆಯೋ ಉರುಳೋ…?

ಕವಿ ಸಮಯ

ಕರಿಮುಗಿಲ ಮರೆಯಿಂದ

ಸೂರ್ಯ ಇಣುಕುತ್ತಿದ್ದಾನೆ

ಪ್ರ‍ಕೃತಿ ತನ್ನಿನಿಯನ

ಮಧುರ ಸ್ಪರ್ಶಕ್ಕಾಗಿ ಕಾಯುತ್ತಿದ್ದಾಳೆ

ಇವರಿಬ್ಬರ ಮಿಲನ ನಯನಮನೋಹರ

ನವವಸಂತದ ಉದಯ

ನಮಗೀ ವಸಂತದಲಿ ಕವಿಸಮಯ

ಹೋಲಿಕೆ-ಸಶೇಷ

ಬದುಕು ಹಾಗೂ ನದಿಗಳ ಹೋಲಿಕೆಯಲ್ಲಿ

ಯಾವುದು ಗೆಲ್ಲುವುದೋ ನಾನರಿಯೆ

ಆದರೆ ಒಂದಂತೂ ನಿಶ್ಚಿತ ಅಲ್ಲೊಂದು ಕಡೆ

ಅಗಾಧತೆಯನ್ನು ಬೆರ‍ೆಯಲೇಬೆಕು

ಸೇರೋ ಮೊದಲು ಸಾರ್ಥಕತೆ ಪಡೆದಿದ್ದರೆ

ಮುಕ್ತಿ ಸಿಗಲೇಬೇಕು…ಇಲ್ಲವಾದರೆ

ಇಲ್ಲವೇ ಇಲ್ಲ…ಸಿಕ್ಕರೆ ಜನ್ಮ ಪಾವನ

ಇಲ್ಲದಿದ್ದರೆ ಸಶೇಷವಾಗುತ್ತೆ ನನ್ನ ಕವನ

ಧ್ರುವೀಕರಣ

ಅಲ್ಲೊಂದು ಇಲ್ಲೊಂದು ವಿಭಿನ್ನತೆಗಳು

ಜೀವ ನಿರ್ಜೀವತೆಯ ಕವಲುಗಳು

ಪ್ರತಿ ಕವಲಿನಲೂ ಟಿಸಿಲೊಡೆದಿವೆ

ಅನಂತ ಅಂತರದ ಪಿಸುಮಾತುಗಳು

ಜನ್ಮಿಸಿದ ಪ್ರಕೃತಿಯ ಶೋಧನೆಯ ಹಾದಿಯಲಿ

ತಡಕಾಡಿ ಫಲಿಸಿಟ್ಟ ರಾಶಿ ಯಾದಿಗಳು

ಎಲ್ಲದರೊಳಗೊಂದು ವಿಭಿನ್ನಾರ್ಥತೆ

ಅರ್ಥೈಸಿಕೊಂಡರಾಗ ಸ್ಪಷ್ಟ ಸಾರ್ಥಕತೆ

ಸಂಜೀವಿನಿಗೊಂದು ಐಚ್ಛಿಕತೆ ಹುಡುಕುವ ಭರ

ಎಡರು ತೊಡರುಗಳ ಹಂದರವ ಹಾದು

ಎಂದಾದರೊಮ್ಮೆ ಕಾಲ್ತೊಡರಿದರೆ ಐಚ್ಛಿಕತೆ

ಅಂತ್ಯ ಅಂದೇ ಆ ದಿವ್ಯ ಸಂಜೀವಿನಿಯ

ನೈಜತೆಗೆ ಸಾಟಿಯಾಗೋ ಇನ್ನೊಂದಿಲ್ಲ

ಇದ್ದರದು ಕ್ಷಣಿಕ ದುರ್ಗಮ ರೂಪ

ಏನು ಗಳಿಸಿದಂತಾಯ್ತು ಅನಿಶ್ಚಿತತೆಯಲಿ

ಬದುಕ ರೂಪಿಸಿದರೆ ಕೊನೆಘಳಿಗೆಯಲಿ

ಎಲ್ಲದರಲೂ ಧ್ರುವೀಕರಣದ ನಿಶ್ಚಿತತೆ

ಸಹಜವದು ಧ್ರುವಗಳೆರಡರ ನಿಯಮ

ಏಕತೆಯ ಅನೇಕತೆಗೆ ಪರಿವರ್ತಿಸಿದ ಸ್ಥಿತಿ

ಕಾರ್ಯಾರ್ಥ ಪಡೆದಾಗ ಅರಿಯುವುದು ನಿಜಸ್ಥಿತಿ

ಅರ್ಪಣೆ

ಕನಸಿನ ಲೋಕದ ಕನ್ನಿಕೆ ನೀನು

ಮನಸಲಿ ನೆಲೆಸಿಹ ಚಂದ್ರಿಕೆ ನೀನು

ಹೃದಯದಿ ಹುದುಗಿಹ ಭಾವನೆ ನೀನು

ನನ್ನೊಳು ಬೆರೆತಿಹ ಸುಂದರಿ ನೀನು

ಹೃದಯದ ಬಾಗಿಲ ತಟ್ಟುವ ತವಕದಿ

ಎಡವಿದೆ ನಾ ಕ್ಷಣ ಭಂಗುರದಿ

ನೆಲೆಸಿಹೆ ನಾನು ನಿನ್ನಯ ಮನದಿ

ಹಾಲೊಳು ಅಡಗಿಹ ಬೆಣ್ಣೆಯ ರೂಪದಿ

ಹೇಗಿರಬಹುದು ಪ್ರೀತಿಯ ಆಳ

ನೆನೆಯಲು ನನ್ನೀ ಮನದಲಿ ತಳಮಳ

ತೆರೆ ಸರಿಯುವುದೆಂದು ಕಾಯುವ ಆ ಝಳ

ಕಾಯಲೇಬೇಕು ಪ್ರೀತಿಗೆ ಅವಳ

ತಿಳಿಯದು ಕಾರಣ ನನ್ನೀ ಹೃದಯಕೆ

ಅವಳನು ಬಯಸಿದ ಅಂತರಾತ್ಮಕೆ

ಅರ್ಪಿತವಾಯಿತು ಅವಳ ಮೋಹಕೆ

ನಿಲುಕದ ಮನಸಿನ ಕನಸಿನ ಲೋಕಕೆ

ನಂಟು

ಎತ್ತೆತ್ತಲಿಂದಲೋ ಗರಿಗೆದರಿ ಬಂದ

ಸಾಲು ಕೂತಿಹ ಹಕ್ಕಿ ಸಾಲಿನಲ್ಲಿ

ಹೊಂಬಣ್ಣ ಸೂಸಿ ನಿಂತ ಆ ಹಕ್ಕಿಗೆ

ಭರವಸೆಯು ಚಿಗುರೊಡೆಯಬೇಕೇ…?


ಹಾಲು ಹಾಲಾಹಲವಾಗಿ ತುಳುಕಿ

ಮಾಮರಕೆ ಆ ಕೋಗಿಲೆ ನಂಟಾಗಿ

ಮತ್ತೊಮ್ಮೆ ಮಗದೊಮ್ಮೆ ಸ್ಪಷ್ಟಮಾತುಗಳಲ್ಲಿ

ಬೆಳವಣಿಗೆಯ ಹಂತ ತಲುಪಬೇಕೇ…?


ವರುಷ ಕಳೆದುಹೋಯ್ತು ಗೂಡ್ ಬರಿದಾಯ್ತು

ಹೊಸತನದ ವೇಳೆಯಲಿ ಕಳೆದೇಹೋಯ್ತು

ಮತ್ತೆ ಹುಡುಕುವರೇನು ಆ ಹಳೆಯ ನೆನಪುಗಳ

ಅರ್ಥೈಸಿಕೊಂಡರಾಗುವುದೆ ಮಾತು…?


ಎದೆಯಾಸೆ ತೆರೆದಿಟ್ಟು ಪ್ರಶ್ನಿಸುತ್ತಿರುವಾಗ

ಉತ್ತರದ ಹುಡುಕಾಟದಲಿ ಕುಳಿತ ಹಕ್ಕಿಗೆ

ತನ್ನಿಷ್ಟಕ್ಕಿಂತ ಮಿಗಿಲಿಹುದು ಎಂದು

ಅರಿವಾಗಲು ಭವದ ಭಯವು ಏಕೆ…?

ಸತ್ಯ

ತೂಗುಗತ್ತಿಯು ತೂಗುತ್ತಿತ್ತು

ನಿದಿರೆ ಬರದೆ ಉರುಳುತ್ತಿತ್ತು

ಮೌನ ತುಂಬಿ ಮಡುಗಟ್ಟಿತ್ತು

ಆಸೆಗಡಲು ಬತ್ತಿ ಹೋಗಿತ್ತು

ದೃಷ್ಟಿ ಶೂನ್ಯದೆಡೆ ಹೊರಳಿತ್ತು

ನಿರೀಕ್ಷೆಗಳಿಗೆ ತಣ್ಣೀರ ಎರಕವಾಗಿತ್ತು

ಭಾವವೆಲ್ಲ ಕರಗಿ ಬರಿದಾಗಿತ್ತು

ಎಲ್ಲ ಮರೆತಿರುವಾಗ ಮತ್ತೆ ನೆನಪಾಗಿತ್ತು

ಗಲ್ಲು ಶಿಕ್ಷೆಯ ಖೈದಿ ನಾನು ಎಂಬ ಸತ್ಯ…

ಮನದಾಳ

ನಿನಗಾಗಿ ನಾ ಏನ ಬರೆಯಬಲ್ಲೆ

ಗೀಚಿ ಹೋದ ಕನಸುಗಳ ಸೌಧ ಕಟ್ಟಲೊಲ್ಲೆ

ಬೆರಗು ಕಂಗಳ ನಿನ್ನ ಮನವ ತಣಿಸಬಲ್ಲೆ

ಎಲ್ಲ ಭರವಸೆಗಳ ಜೊತೆಯಾಗಿ ಬಾಳಬಲ್ಲೆ

ಗೆಳತೀ ನಿನ್ನ, ಹೃದಯದಲ್ಲಿಟ್ಟು ಕೇಳಬಲ್ಲೆ

ಏಕೆ ಈ ದುಗುಡ ಮನಬಿಚ್ಚು ನನ್ನೆದುರು

ಎಲ್ಲ ಗೂಢಾರ್ಥದ ಬೇಲಿ ತೊಡೆದು

ನೀ ನನ್ನ ಪುಟ್ಟ ಮಗು ನನ್ನೆದೆಯಲಿ

ಲಾಲಿ ಹಾಡುವ ತವಕ ಪ್ರತಿಕ್ಷಣದಲಿ

ಜೊತೆ ಸೇರು ಪಯಣದಲಿ ಸ್ಪಷ್ಟವಾಗಿ

ಸಾಸಿರದ ವೇದನೆಯ ಜೊತೆಗೂಡಿಕೊಂಡು

ಎಲ್ಲ ರುಧಿರದ ಬೇಗೆ ಕಡಲಲಿ

ನನ್ನುಸಿರ ಬಿಸಿ ಆರದಂತೆ ಅದ

ಸುಪ್ತವಾಗಿ ನಿನ್ನುಸಿರಲಿ ಬಂಧಿಸಿಡು

ಗೆಳತೀ ನನ್ನೀ ಒಲವಲಿ ಕಲೆತುಬಿಡು…

ಸ್ವಾರ್ಥ-ನಾಚಿಕೆ

ಮಂದಹಾಸದ ಮರೆಯಲ್ಲಿ ನಾಚಿ ನಿಂತಿದೆ ನಾಚಿಕೆ

ಯಾಕೋ ಏನೋ ನನ್ನವಳ ಮುಖ ಕಮಲದಲಿ

ಕನಸ ಹೊತ್ತ ಬೊಗಸೆ ಕಂಗಳ ಹುಡುಗಿ

ನೇಸರಗೆ ಬೆಳಕಾಗಲು ಹೋದಂತೆ ಕಂಡರೂ

ನನಗಾಗಿಯೇ ಆ ಬೆಳಕೆಂದುಕೊಂಡೆ ಸ್ವಾರ್ಥದಲಿ

ಮರೆಯಾಗಿ ಹೋಯಿತು ನಾಚಿಕೆ ಹಾಗೇ

ಉಡುಗಿ ಹೋಯಿತು ನನ್ನ ಸ್ವಾರ್ಥ ಹೀಗೇ…

ನೇಪಥ್ಯ

ನೇಪಥ್ಯದ ಹಾದಿಯಲಿ ನಡೆದಿರಲು

ದನಿಯೊಂದು ಹಿಂಬಾಲಿಸಿದಂತೆ

ನೆನಪ ಪುಟದ ಹಾಳೆಗಳ ಹರಿದಂತೆ

ಹೃದಯ ಮಿಡಿತವ ಹಿಡಿದು ಸ್ತಂಭಿಸಿದಂತೆ

ಭಾಸವಾಗುವ ಮುನ್ನ ಎಚ್ಚರಾಗು ನೀ

ಕಷ್ಟಕ್ಕೆ ಸಿಲುಕುವ ಮೊದಲು ತಿಳಿ ನೀ

ಭವಿಷ್ಯದ ಕದವ ತಟ್ಟಿ ಮನಸ್ಸೆಂಬ ತಾಳೆಗರಿ ಓದಿ

ಪ್ರೀತಿಯ ಓಲೆ

ಹೃದಯ ಮಂದಿರದಲ್ಲಿಟ್ಟು ಪೂಜಿಸಲು


ಯಾರನ್ನೋ ಹುಡುಕುತ್ತಿದ್ದೆ

ಪ್ರತೀ ಮಲ್ಲಿಗೆಯಲೂ

ಒಂದೇ ರೀತಿ ಕಂಪು

ಅದರೊಳಗೆ ಮುದುಡಿತ್ತೊಂದು ಕೆಂಗುಲಾಬಿ

ತನ್ನ ಬಯಕೆಗಳನ್ನೆಲ್ಲಾ ಬಚ್ಚಿಟ್ಟು
ಆಕರ್ಷಿಸಿದ್ದು ಅದರ ಬಣ್ಣ ರೂಪವಲ್ಲ

ಮುದುಡಿ ಕುಳಿತ್ತಿದ್ದ ನಿಷ್ಕಲ್ಮಷ ಮನಸು

ಎಲ್ಲೆಲ್ಲೋ ಅಲೆದಾಡಿ ಸುಸ್ತಾದ ಜೀವಕೆ

ಓಯಸಿಸ್ ದೊರಕಿದಂತಾಗಿತ್ತು

ಬಯಸಿ ಹೋದಾಗ ಜೀವತಾಳಿ ಹೇಳಿತು

ನೀನಂದ್ರೆ ತುಂಬಾನೇ ಇಷ್ಟ

ಆದ್ರೆ ನಿರ್ಧಾರಗಳು ನನದಲ್ಲ ಇನ್ನು

ಆದರೇನು.. ಮೊದಲೂ ಕೊನೆಯೂ

ಎರಡೂ ಆ ಗುಲಾಬಿಯ ನೆನಪಲಿ

ಬದುಕುವುದು ಈ ಜೀವ ಎಂದರೆ

ಅವಳ ಉತ್ತರವೇನೋ ನಾಕಾಣೆ


ನೀವು ಬಲ್ಲಿರಾ….?

ಈ ಬಾಳ ಹಾದಿಯಲಿ…

ಬಾಳೆಂಬ ಜಲಧಿಯಲಿ

ಹೊಸ ಬಾಂಧವ್ಯದ ನೌಕೆಯಲಿ

ಸಾಗುವ ಮಧುರತೆಯ ವಿಹಾರ

ಹೊಸ ಲೊಕ ಹೊಸ ದೃಷ್ಟಿಕೋನದೆಡೆಗೆ

ಹಿತವಾಗಿ ತನ್ಮಯತೆಯಿಂದ ಸಾಗುತ್ತಿದೆ
ಅಡೆ ತಡೆ ಸಹಜವದು ಈ ಬಾಳ ಹಾದಿಯಲಿ

ಬಾಂಧವ್ಯದ ಸ್ಥಿರತೆ ಅಳಿಸುವುದು ತಡೆಗಳ

ಮತ್ತೆ ಚಲಿಸುವುದು ನೆನಪುಗಳ ಪಯಣ

ಬರಿದಾದ ಹೃದಯಗಳ ಮರು ಸಮ್ಮಿಲನ

ನಡುವೆ ತಡೆಯ ನಿರೀಕ್ಷೆಯಿಲ್ಲದೆ

ಪ್ರತಿನಿತ್ಯ ನವ ವಸಂತ ಗಾನದ ಮೋಡಿ

ಎಷ್ಟು ಹೊತ್ತು ಇದ್ದೀತು ಈ ಇಂಚರ

ಬದಲಾಗುವ ಪ್ರಕೃತಿ ತೊಳಲಾಡುವ ಮಾನವ

ಹೊದುತ್ತಿದೆ ಬದಲಾವಣೆ ಎಂದಿನಂತೆ

ತಮ್ಮಿಬ್ಬರ ಬಾಂಧವ್ಯವನು ನೆನಪಿಸುತ್ತಾ
ಭವಿಷ್ಯವೆಂಬ ಮಿನುಗು ನಕ್ಷತ್ರದ ಶೋಧದಲಿ

ಜತೆ ಇದ್ದರೆ ಚೆನ್ನ ಅನ್ನಿಸೀತು…

ಸಹಜ…. ನನಗೂ ಅನ್ನಿಸಿತು ಜೊತೆ ಇರಲಿ

ಬಾಳು ಬೆಳಗಲು ಸಾಂತ್ವನದ ಸ್ಪರ್ಶ

ಈ ಬಾಳ ಹಾದಿಯ ಪಯಣಕೆ ಹೊಸ ಅರ್ಥ.

ಮರೆಯಾದ ಒಲವು

ಜೊತೆಯಾಗಿ ಬಳಿಯಿದ್ದು ಮರೆಯಾಗಿ ಹೋದೆ ಎಲ್ಲಿ..?

ಕನಸುಗಳ ಸಾಮ್ರಾಜ್ಯ ಕಟ್ಟಿ ಕಳೆದು ಹೋದೆಯಾ ಗೆಳತಿ..?

ಈ ಜನುಮದ ಬಾಂಧವ್ಯ ಹಣತೆ

ಪ್ರಜ್ವಲಿಸಿ ಹೊಮ್ಮಿಸಿತು ಭರವಸೆ

ಬಿಡದೆ ತಳಮಳ ಕಾಡಿತು ನಿರಾಸೆ

ಎಲ್ಲ ದುಃಖದ ನಡುವೆ ಚಿಗುರಿತ್ತೊಂದಾಸೆ

ನಿನಗೆ ನಾ ಬೇಕೆಂದು ಕಿವಿಯಲೊಮ್ಮೆ ಉಸುರಿದ್ದೆ

ಉಸಿರ ಬಿಸಿ ಆರಿದಂತೆ ಎಲ್ಲ ಮರೆತಿದ್ದೆ

ಕನಸ ಚಾವಡಿಯಲ್ಲಿ ನಿನ್ನ ಜೊತೆ ಹರಟಿದ್ದೆ

ನನಸಾಗದಾ ಹರಟೆಗೆ ನನ್ಯಾಕೇ ಕರೆದೇ..?

ಪ್ರೀತಿಯೋ ಮಾಯೆಯೋ ಕತ್ತಲೆಯ ಕೂಪವೋ..?

ಒಲವೆಂಬ ಬೆಳಕೂ ನಂದಿ ಹೋಯ್ತೋ..?

ನನ್ನ..ಮನಃ ಸಾಗರದ ಮಧ್ಯೆ ನಿಲ್ಲಿಸಿ ಕೇಳು

ನಿನ್ನ ಬದುಕಿನ ಸುಖಕೆ ನಾನೆ ಮುಳುಗುವೆ

ಗೆಳತೀ…!!! ನಾನೆ ಮುಳುಗುವೆ…!!!

“ಪ್ರೀತಿ” ಎಂಬ ಎರಡಕ್ಷರದಲ್ಲಿದೆ “ಪ್ರೀ”ತಿಸು ಅಥವಾ “ತಿ”ರಸ್ಕರಿಸು…!!! ಎಂಬ ಮಾತು..

“ಪ್ರೀತಿ” ಎಂಬ ಎರಡಕ್ಷರದಲ್ಲಿದೆ “ಪ್ರೀ”ತಿಸು ಅಥವಾ “ತಿ”ರಸ್ಕರಿಸು…!!! ಎಂಬ ಮಾತು.. ಮನಸ್ಸು ಅನ್ನೋದು ಒಂದು ತಾವರೆಯ ಎಲೆಯ ಹಾಗೆ… ಅದರ ಮೆಲೆ ಬೀಳೋ ಪ್ರತೀ ಹನಿ ನೀರೂ ಅತ್ತಿತ್ತ ಆಟವಾಡುತ್ತಾ ಕೊನೆಗೊಮ್ಮೆ ಮರದಿಂದ ಕಾಯಿ ಉದುರಿ ಬಿದ್ದ ಹಾಗೆ ಕಳೆದು ಹೋಗುತ್ತದೆ. ಪ್ರೀತಿ ಅನ್ನೋ ಶಬ್ಧ ಕೂಡಾ ಅಷ್ಟೇ.. ಜಾಗರೂಕತೆಯಿಂದ ಬಳಸದೇ ಹೋದರೆ ಮತ್ತೆಂದೂ ಮರಳಿ ಬರೋದಿಲ್ಲ. “ಪ್ರೀತಿ” ಎಷ್ಟು ಹಿತವಾಗಿದೆ ಅಲ್ವಾ..

ಈ ಭೂಮಿ ಮೇಲೆ ಪ್ರೀತಿ ಇಲ್ಲದೇ ಇದ್ದಿದ್ದರೆ ಇಡೀ ವಿಶ್ವವೇ ಒಂದು ಸ್ಮಶಾನವಗುತ್ತಿತ್ತು ಅನ್ನೋ ಮಾತು ಎಷ್ಟು ಅರ್ಥಪೂರ್ಣ ಅಲ್ವಾ….? ಮಗುವಾಗಿರುವಾಗ ಹೆತ್ತವರ ಪ್ರೀತಿ, ಬೆಳೆಯುತ್ತಾ ಶಿಕ್ಷಕರ ಓರಗೆಯವರ ಪ್ರೀತಿ, ಯೌವನಾವಸ್ತೆಯಲ್ಲಿ ಗೆಳೆಯ/ಗೆಳತಿಯರ ಪ್ರೀತಿ, ಪ್ರೌಢಾವಸ್ಥೆಯಲ್ಲಿ ಬಾಳಸಂಗಾತಿಯ ಪ್ರೀತಿ, ಕೊನೆಗಾಲದಲ್ಲಿ ಮಕ್ಕಳ ಪ್ರೀತಿ… ಹೀಗೆ ಆರಂಭವಾಗಿ ಕೊನೆಯಗುತ್ತೆ ಪ್ರೀತಿ.

ಕಾಲ ಪಥದ ಪಯಣ

ಮೊನ್ನೆ ದಾರಿಯಲ್ಲಿ ಬರುವಾಗ ಸಿಕ್ಕಿದ್ದಳು ಗಂಗಾ. ಏನಮ್ಮಾ ಹೇಗಿದ್ದೀಯ ಅಂದಾಗ ಮುಖ ಮುಚ್ಚಿ ಅತ್ತಿದ್ದಳು. ತನ್ನ ಬದುಕು ಅನೈತಿಕತೆಯ ದಾರಿ ಹಿಡಿದು ಸಾಗುತ್ತಿರುವುದನ್ನು ತಿಳಿಸಿದ್ದಳು. ಆದರೆ ಇನ್ನು ಏನು ತಾನೆ ಮಾಡಿಯಾಳು…? ಕಾಲ ಮಿಂಚಿ ಹೋಗಿತ್ತು. ಜನರ ಬಾಯಲ್ಲಿ ಕಥೆಯಾಗಿತ್ತು.

ಗಂಗಾಳ ಕುಟುಂಬ ಸುಖೀ ಕುಟುಂಬವಾಗಿತ್ತು. ತಂದೆ, ತಾಯಿ, ಅಕ್ಕ, ತಂಗಿಯರನ್ನೊಳಗೊಂಡ ತುಂಬು ಸಂಸಾರ. ತಂದೆ ತಾಯಿ ಇಬ್ಬರೂ ಅನ್ಯ ಜಾತಿಯವರು. ಆದರೆ ನಮ್ಮ ಸಮಾಜದಲ್ಲಿ ಅರ್ಥಿಕತೆಯನ್ನು ಆಧರಿಸಿ ಜಾತಿ ನಿಶ್ಚಯವಾಗುತ್ತದೆ. ಈ ರೀತಿಯ ಬಾಳ್ವೆಯ ನಡುವೆ ಒಂದು ದಿನ ತಾಯಿ ಇಹಲೋಕ ತ್ಯಜಿಸಿದಳು. ತಂದೆಯ ಹೆಗಲಿಗೆ ಹೆಚ್ಚಿನ ಜವಾಬ್ದಾರಿ ಬಿತ್ತು. ಅವರು ಮಕ್ಕಳನ್ನು ಓದಿಸಿ, ಬೆಳೆಸಿ ದೊಡ್ಡವರನ್ನಾಗಿಸುವ ವರೆಗೆ ತಮ್ಮ ಪ್ರೀತಿ ವಾತ್ಸಲ್ಯದ ಧಾರೆಯೆರೆದಿದ್ದರು. ಹೀಗೆ ಬೆಳೆದ ಮಕ್ಕಳನ್ನು ಒಮ್ಮೆ ಬಿಟ್ಟು ಹೋದಾಗ ಮಕ್ಕಳಿಗೆ ದಿಕ್ಕಿಲ್ಲದಂತಾಗಿ ಹೋಗಿತ್ತು. ಆ ಸಮಯಕ್ಕೆ ಇನ್ನೂ ಹರೆಯದಲ್ಲಿದ್ದ ಗಂಗಾಳ ಅಕ್ಕ ಸೇಲ್ಸ್ ಗರ್ಲ್ ಕೆಲಸಕ್ಕೆ ಸೇರಿಕೊಂಡಳು. ಆಗಿನ್ನೂ ಅವರ ತಂಗಿಗೆ ೪ ವಯಸ್ಸು. ಹೀಗೆ ಹೇಳಿ ನಿಲ್ಲಿಸಿದ್ದರು ಗಂಗಾಳ ಕುಟುಂಬದ ಕಥೆಯನ್ನು ಪಕ್ಕದ ಮನೆಯ ಲಕ್ಷೀ ಅಕ್ಕ.

ಒಟ್ಟಿಗೇ ನೋಡಿ ಬೆಳೆದಿದ್ದರೂ ಅವಳೊಂದಿಗೆ ಅಷ್ಟೊಂದು ಒಡನಾಟವಿರಲಿಲ್ಲ. ಈಗಲೂ ಇಲ್ಲ. ಹಾಗಂತ ಅವಳು ಕೆಟ್ಟವಳಲ್ಲ. ಊರಿನವರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದಳು. ಆದರೆ ಇಬ್ಬರು ಹೆಣ್ಣು ಮಕ್ಕಳ ಮನೆ ಕಚ್ಚೆ ಹರುಕರ ಪಾಲಿಗೆ ರಂಗಸ್ಥಳದಂತೆ ಗೋಚರಿಸಿತು. ಈಗೆಲ್ಲಾ ಆಧುನಿಕತೆ ಬೆಳೆದಿದೆ. ಆದರೆ ಹಿಂದೆ ಎಲ್ಲಾ ಸಿಂಪಲ್ ಆಗಿತ್ತು. ಬೀಡಿ ಕಟ್ಟುತ್ತಿದ್ದ ಗಂಗಾ ಒಬ್ಬಳೇ ಕುಳಿತುಕೊಂಡಿರಲು ಬೇಸರವಾಗಿ ಊರಿನ ಪಂಚಾಯತ್ ಸದಸ್ಯ ರಾಮನಾಥನ ಮನೆಗೆ ಹೋಗಿ ಆತನ ಪತ್ನಿ ಗಾಯತ್ರಿಯೊಂದಿಗೆ ದಿನವಿಡೀ ಕುಳಿತು ಹರಟೆ ಹೊಡೆಯುತ್ತಾ ಬೀಡಿ ಕಟ್ಟುವ ಕಾಯಕ ನಿರ್ವಹಿಸುತ್ತಿದ್ದಳು. ಹರಟೆಯ ನಡುವೆ ಟಿ.ವಿ ಧಾರಾವಾಹಿಗಳಲ್ಲಿ ಬರುವ ಸನ್ನಿವೇಶಗಳ ಬಗ್ಗೆ, ಹಾಸ್ಯ, ವ್ಯಂಗ್ಯ, ಕುತೂಹಲದ ಚರ್ಚೆಗಳು, ಇವೆಲ್ಲವುಗಳಿಂದ ಸಮಯ ಕಳೆದದ್ದೇ ತಿಳಿಯುತ್ತಿರಲಿಲ್ಲ. ಹೀಗಿದ್ದಾಗ ಒಂದು ದಿನ ರಾಮನಾಥನ ಮನೆಗೆ ಅವನ ಸಂಭಂಧಿಕನೊಬ್ಬ ಬಂದ. ಅದೊಂದು ಪೂರ್ವ ನಿರ್ಧಾರಿತ ಆಗಮನ. ರಾಮನಾಥನ ಪತ್ನಿ ತಾನೊಬ್ಬಳು ಹೆಣ್ಣು ಎಂದು ಯೋಚಿಸದೆ ಸಂಭಂಧಿಕನ ಇಚ್ಚೆಗೆ ಪೂರಕವಾಗಿ ನಡೆದುಕೊಳ್ಳುವಂತೆ ಗಂಗಾಳನ್ನು ಪ್ರೇರೇಪಿಸಿದಳು. ಏನೋ ಒಂದು ವಿಷ ಘಳಿಗೆಯಲ್ಲಿ ಬಾಲ್ಯದಿಂದ ಯೌವನದ ತೀವ್ರತೆಯೆಡೆಗೆ ಮುನ್ನಡೆಯುತ್ತಿದ್ದ ವಯಸ್ಸು ಹಾಗೂ ಮನಸ್ಸು ತಾಳ ತಪ್ಪಿತು. ರಾಮನಾಥನ ಮಡದಿಯ ಕುತಂತ್ರ ಹಾಗೂ ಆಕೆಯ ಸಂಭಂಧಿಕನ ಕಾಮದಾಸೆಗೆ ಬಲಿಯಾಗಿದ್ದಳು ಗಂಗಾ.

ಸಂಜೆ ಅಕ್ಕ ಮನೆಗೆ ಬಂದಾಗ ಗಂಗಾ ಆಕೆಗೆ ವಿಷಯ ತಿಳಿಸಿದ್ದಳು. ಯಾರಲ್ಲೂ ಈ ವಿಷಯ ಹೇಳುವುದು ಬೇಡ ಎಂದು ಅಕ್ಕ ಸಮಾಧಾನಪಡಿಸಿದಳು. ಆದರೆ ರಾಮನಾಥನ ಮಡದಿಗೆ ತನ್ನ ನಾಲಿಗೆಗೆ ಕಡಿವಾಣ ಹಾಕಲು ಸಾಧ್ಯವಾಗಲಿಲ್ಲ. ಒಂದು ದುರ್ದ್ಯೆವದ ದಿನ ಆಕೆ ಸಾರಿಬಿಟ್ಟಳು. ಅಲ್ಲಿಗೆ ಆರಂಭವಾಯಿತು ಗಂಗಾಳ ಬದುಕಿನ ಅವನತಿ.

ಪ್ರತೀ ಬಾರಿಯೂ ಆಕೆಯನ್ನರಸಿಕೊಂಡು ಕಚ್ಚೆ ಹರುಕರ ಗುಂಪು ಬರುತ್ತಿತ್ತು. ಅಪ್ರಯತ್ನಪೂರ್ವಕವಾಗಿ ಆಕೆ ಆ ದುಷ್ಟ, ಹೇಯ ವರ್ತುಲದೊಳಗೆ ಸಿಲುಕಿಕೊಂಡಿದ್ದಳು. ಅಂತೂ ಇಂತೂ ಬಳಲಿ ಬೆಂಡಾಗಿದ್ದ ಗಂಗಾ ಕೊನೆಗೊಂದು ದಿನ ಹಳೆಯ ವಸ್ತುವಾಗಿ ಬದಲಾದಾಗ ಎಲ್ಲಾ ಗುಂಪು ಚದುರಿತು. ಆಕೆ ಮಾನಸಿಕವಾಗಿ ತುಂಬಾ ಜರ್ಜರಿತಳಾಗಿ ಹೋಗಿದ್ದಳು. ಆದರೆ ಎಷ್ಟೇ ಕಲುಷಿತವಾದರೂ ಗಂಗೆಯನ್ನು ಪಾವನೆ ಎಂದೇ ಪರಿಗಣಿಸಿದ ಯುವಕನೊಬ್ಬ ಆಕೆಯ ಜೀವನಾಧಾರಕ್ಕಾಗಿ ತನ್ನ ಬದುಕನ್ನೇ ನೀಡಿದ. ಆಕೆಯ ಬದುಕಿನಲ್ಲಿ ನವ ವಸಂತ ಚಿಗುರಿತು. ಅವಳ ಬದುಕು ಸಂತೋಷದಿಂದ ಮುನ್ನಡೆಯತೊಡಗಿತು…….ಮುನ್ನಡೆಯುತ್ತಿದೆ….

ಇದು ಬರೀ ಕಥೆಯಲ್ಲ..,ಸತ್ಯಕಥೆ. ಹೀಗೆ ಎಷ್ಟು ಗಂಗೆಯರ ಬದುಕು ಮುರುಟಿಹೋಗಿರಬಹುದು……? ದುಷ್ಟೆ ಗಾಯತ್ರಿಯಂತಹ ಧೂರ್ತೆಯರು ಇನ್ನೆಷ್ಟು ದುರ್ಬಲ ಹೆಣ್ಣು ಮಕ್ಕಳನ್ನು ಅನೈತಿಕತೆಯ ಹಾಳು ಕೂಪಕ್ಕೆ ತಳ್ಳುತ್ತಾರೋ ಏನೋ…..? ಗಂಗೆಯಂತೆ ಮರಳಿ ನೈತಿಕತೆಯೆಡೆಗೆ ಬರಲು ಸಾಧ್ಯವಾಗದ ಅದೆಷ್ಟು ಜೀವಗಳು ಈಗಲೂ ಆ ಕತ್ತಲೆಯ ಕೂಪದೊಳಗೆ ನರಳುತ್ತಿರಬಹುದು….? ಅವರಿಗೂ ಚೆನ್ನಾಗಿ ಬಾಳಿ ಬದುಕಬೇಕೆಂಬ ಆಸೆಯಿರುವುದು ಸಹಜ ತಾನೇ….?

ಹೀಗೆ ಈ ಸತ್ಯ ಕಥೆಯನ್ನು ನಿಮ್ಮಲ್ಲಿ ವಿವರಿಸಿದ್ದೇನೆ. ನಾನಂತೂ ಗಂಗಾಳ ಜೀವನದ ಕಥೆ ಕೇಳಿ ಅಧೀರನಾಗಿ ಹೋದೆ. ಅದು ಸಹಜ ಕೂಡ. ಹೆಣ್ಣು ಹೆಣ್ಣಿನಿಂದಲೇ ಶೋಷಿತಳಾಗುತ್ತಿರುವುದಕ್ಕೆ ಇದೊಂದು ಉದಾಹರಣೆ ಅಷ್ಟೇ. ಗಂಡಿನಿಂದ ಹೆಣ್ಣು ಶೋಷಿತಳಾಗಿಲ್ಲ ಎಂಬುದು ಇದರ ಅರ್ಥವಲ್ಲ. ಆದರೂ ತಲೆತಲಾಂತರಗಳಿಂದ ಹೆಣ್ಣು ಶೋಷಣೆಗೊಳಗಾಗುತ್ತಿದ್ದಾಳೆ. ಈ ಅಧುನಿಕತೆಯಲ್ಲಿ ಹೆಣ್ಣು ಅಭಿವೃದ್ದಿ ಪಥದಲ್ಲಿ ಮುನ್ನಡೆಯುತ್ತಿದ್ದಾಳೆ ಎಂದು ಘಂಟಾಘೋಷವಾಗಿ ಸಾರುವ ಈಗಿನ ಆಧುನಿಕ ಸಮಾಜ ಆಕೆ ಆಂತರಿಕವಾಗಿ ಶೋಷಿತಳಗುತ್ತಿರುವುದನ್ನು ಕಾಣುತ್ತಿಲ್ಲ.

ಇದನ್ನು ಗಮನಿಸಿ ಅವಳ ಬದುಕನ್ನು ರೂಪಿಸಲು ಶ್ರಮಿಸಿದರೆ ಇದೇ ಸಮಾಜ ಘೋಷಿಸುತ್ತಿರುವ “ಸ್ತ್ರೀ ಅಭಿವೃದ್ದಿಯೆಡೆಗೆ” ಎಂಬ ಮಾತು ಸಾಕಾರಗೊಳ್ಳಲು ಸಾಧ್ಯ. ಈವರೆಗೂ ಜಗದ್ಗುರು ಭಾರತದ ಮುನ್ನಡೆಗೆ ಸ್ತ್ರೀ ಬೆನ್ನೆಲುಬಾಗಿದ್ದಳು. ಇನ್ನು ಮುಂದೆಯೂ ನಮ್ಮ ಪ್ರತೀ ಅಭಿವೃದ್ದಿಯಲ್ಲೂ ಆಕೆಯ ಸಾರಥ್ಯ ಭಾರತದ ಮುನ್ನಡೆಗೆ ಅವಶ್ಯ……ಮುನ್ನಡೆಯೋಣ.